ಹೈದರಾಬಾದ್ :ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಿರುವ ಕಾಂಗ್ರೆಸ್ಗೆ 'ಮಹಿಳಾಘಾತ' ಉಂಟಾಗಿದೆ.
2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.40ರಷ್ಟು ಮಹಿಳೆಯರನ್ನು ಅಭ್ಯರ್ಥಿಗಳಾಗಿ ನಿಲ್ಲಿಸುವುದಾಗಿ ಈಗಾಗಲೇ ಘೋಷಿಸಿದೆ. ಆದರೆ, ಈವರೆಗೂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಬಂದ 110 ಹುರಿಯಾಳುಗಳಲ್ಲಿ ಕೇವಲ 18 ಮಂದಿ ಮಾತ್ರ ಮಹಿಳೆಯರಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿದೆ.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗಷ್ಟೇ ಪ್ರಚಾರ ಸಭೆಯಲ್ಲಿ 40 ಪ್ರತಿಶತ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಿಸಿದ್ದರು. ಅಲ್ಲದೇ, ‘ನಾನೊಬ್ಬ ಹುಡುಗಿ, ನಾನು ಹೋರಾಡಬಲ್ಲೆ’ ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ. ಬಳಿಕ ಅಭ್ಯರ್ಥಿಗಳಾಗಲು ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಹೇಳಿ ಕಾಂಗ್ರೆಸ್ ಕೂಡ ಅರ್ಜಿ ಕರೆದಿತ್ತು.
ಇದೀಗ ಗಡುವು ಮುಗಿದಿದ್ದು, ಸ್ಕ್ರೀನಿಂಗ್ ಕಮಿಟಿಯು ಅರ್ಜಿದಾರರ ಪರಿಶೀಲನೆ ನಡೆಸಿದಾಗ ಮಹಿಳಾ ಅರ್ಜಿದಾರರ ಸಂಖ್ಯೆ ತೀರಾ ಕಡಿಮೆ ಇರುವುದು ಕಂಡು ಬಂದಿದೆ. ಅಭ್ಯರ್ಥಿಗಳಾಗಲು 110 ಜನರು ಅರ್ಜಿ ಹಾಕಿದ್ದು, ಅದರಲ್ಲಿ 18 ಮಂದಿ ಮಹಿಳೆಯರು ಮಾತ್ರ ಇದ್ದಾರೆ. ಲಖನೌ ಸೆಂಟ್ರಲ್‌ನ 15 ಸ್ಪರ್ಧಿಗಳಲ್ಲಿ 7 ಮಹಿಳೆಯರು, ಮೋಹನ್‌ಲಾಲ್‌ಗಂಜ್‌ನಲ್ಲಿ 3, ಪೂರ್ವದಲ್ಲಿ 3, ಕ್ಯಾಂಟ್‌ನಲ್ಲಿ 2 ಮತ್ತು ಉತ್ತರದಿಂದ ಇಬ್ಬರು ಮಹಿಳೆಯರು ಮಾತ್ರ ಅರ್ಜಿ ಗುಜರಾಯಿಸಿದ್ದಾರೆ.
ಇದನ್ನೂ ಓದಿ: ಮತದಾರರ ಚೀಟಿ ಆಧಾರ್ ಸಂಖ್ಯೆಗೆ ಲಿಂಕ್: ವಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿಂದು ಮಸೂದೆ ಅಂಗೀಕಾರ
ಅರ್ಜಿ ಹಾಕಿದವರಲ್ಲಿ ಪುರುಷರ ಸಂಖ್ಯೆ ಹೆಚ್ಚಾಗಿದೆ. ಇಡೀ ರಾಜ್ಯದಲ್ಲಿ 1700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಮಹಿಳಾ ಅರ್ಜಿದಾರರ ಕೊರತೆ ಇರುವ ಕಾರಣ, ಹುರಿಯಾಳುಗಳನ್ನು ಹುಡುಕುವುದೇ ಕಾಂಗ್ರೆಸ್ಸಿಗೀಗ ದೊಡ್ಡ ಸವಾಲಾಗಿದೆ.
ಇದು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿಪಕ್ಷ ಸಮಾಜವಾದಿ ಪಕ್ಷ ಕಾಂಗ್ರೆಸ್ ವಿರುದ್ಧ ಮುರಿದು ಬೀಳಲು ಅಸ್ತ್ರವೊಂದು ಸಿಕ್ಕಂತಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.