ಕೋಲ್ಕತ್ತಾ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಯುಪಿಎ ಅಸ್ತಿತ್ವವನ್ನು ಪ್ರಶ್ನಿಸಿದ ಬಳಿಕ ಕಾಂಗ್ರೆಸ್ ಮತ್ತು ಟಿಎಂಸಿ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ.
ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಅದು ಶಕ್ತಿಹೀನ ಪಕ್ಷವಾಗಿದೆ. ಪಕ್ಷ 'ಕೋಮಾ ಸ್ಥಿತಿ'ಗೆ ಜಾರಿದೆ ಎಂದು ಟಿಎಂಸಿ, ದೇಶದ ಹಳೆ ಪಕ್ಷವನ್ನು ವಿರುದ್ಧ ಕಟುವಾಗಿ ಟೀಕಿಸಿದೆ.
ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿರುವ ಜಾಗೋ ಬಾಂಗ್ಲಾದಲ್ಲಿ 'ಕಾಂಗ್ರೆಸ್ ಇನ್ ಡೀಪ್ ಫ್ರೀಜರ್' ಎಂಬ ತಲೆಬರಹದಲ್ಲಿ ಭಿತ್ತರಿಸಿದ ಸುದ್ದಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಲಾಗಿದೆ. ಮುಂದುವರಿದು ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯುವಷ್ಟು ಬಲಯುತವಾಗಿಲ್ಲ. ಅದು ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದೆ. ಅಂತಹ ಪಕ್ಷ ಬಿಜೆಪಿ ವಿರುದ್ಧ ಹೋರಾಡುವುದು ಹೇಗೆ?. ಯುಪಿಎ ಅಸ್ತಿತ್ವ ಕಳೆದುಕೊಂಡಿದೆ ಎಂದೆಲ್ಲಾ ಟೀಕಿಸಲಾಗಿದೆ.