ನವದೆಹಲಿ: ಮುಸ್ಲಿಂ ಲೀಗ್ ಜಾತ್ಯತೀತ ಸಂಘಟನೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ ಕಮಲ ಪಕ್ಷಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ವಾಸ್ತವವಾಗಿ ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ಗೆ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ರಚಿಸಿದ ಮುಸ್ಲಿಂ ಲೀಗ್ ಬಗ್ಗೆ ಅಲ್ಲ. ಆದರೆ, ಇದೇ ಜಿನ್ನಾ ಮುಸ್ಲಿಂ ಲೀಗ್ ಅನ್ನು ಬಿಜೆಪಿ ಪ್ರೀತಿಸುತ್ತಿದೆ. ಏಕೆಂದರೆ, ಪಕ್ಷದ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಜಿನ್ನಾ ಮುಸ್ಲಿಂ ಲೀಗ್‌ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರು ಎಂದು ಕೈಪಡೆ ಕುಟುಕಿದೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ವಾಷಿಂಗ್ಟನ್ನ ನ್ಯಾಷನಲ್ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷ ಎಂದು ಹೇಳಿದ್ದರು. ಐಯುಎಂಎಲ್ ದೀರ್ಘಕಾಲದಿಂದ ಕಾಂಗ್ರೆಸ್ ಮಿತ್ರ ಪಕ್ಷವಾಗಿತ್ತು. ಕೇಂದ್ರದಲ್ಲಿ ಹಿಂದಿನ ಯುಪಿಎ ಸರ್ಕಾರದ ಭಾಗವೂ ಆಗಿತ್ತು.
ಅಡ್ವಾಣಿ ಬಳಿ ಪ್ರಶ್ನಿಸಿ - ಕಾಂಗ್ರೆಸ್: ಆದರೆ, ಮುಸ್ಲಿಂ ಲೀಗ್ ಎಂಬ ಪದವನ್ನು ಹಿಡಿದುಕೊಂಡು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿತ್ತು. ರಾಹುಲ್ ಹೆಚ್ಚು ಓದಿಲ್ಲ. ಇತಿಹಾಸದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ ಎಂದು ಆರೋಪಿಸಿತ್ತು. ಈ ಬಗ್ಗೆ ಕಾಂಗ್ರೆಸ್ ವಕ್ತಾರ ಪ್ರೊ.ಗೌರವ್ ವಲ್ಲಭ್ ಪ್ರತಿಕ್ರಿಯಿಸಿ, ಬಿಜೆಪಿಯು ಮುಸ್ಲಿಂ ಲೀಗ್‌ನೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ ಮತ್ತು ಅದನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಸಂಸ್ಥಾಪಕ ಎಲ್ಕೆ ಅಡ್ವಾಣಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಜಿನ್ನಾ ಸ್ಮಾರಕಕ್ಕೆ ತೆರಳಿ ಅವರನ್ನು ಅತಿ ದೊಡ್ಡ ಜಾತ್ಯತೀತ ನಾಯಕ ಎಂದು ಬಣ್ಣಿಸಿದ್ದರು. ಮಾಜಿ ಪ್ರಧಾನಿಗಳು ಸೇರಿದಂತೆ ಹಲವಾರು ಭಾರತೀಯ ನಾಯಕರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಆದರೆ, ಯಾರೂ ಕೂಡ ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಲಿಲ್ಲ ಮತ್ತು ಅವರನ್ನು ಅತಿದೊಡ್ಡ ಜಾತ್ಯತೀತ ನಾಯಕ ಎಂದೂ ಶ್ಲಾಘಿಸಲಿಲ್ಲ. ಬಿಜೆಪಿಯವರು ಹೋಗಿ ಅಡ್ವಾಣಿಯವರ ಬಳಿ ಈ ಬಗ್ಗೆ ಪ್ರಶ್ನಿಸಬೇಕೆಂದು ತಿರುಗೇಟು ನೀಡಿದ್ದಾರೆ.
ಅಲ್ಲದೇ, ಐಯುಎಂಎಲ್ ಭಾರತದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾಗಿದೆ. ಚುನಾವಣಾ ಆಯೋಗವು ಜಾತ್ಯತೀತವಲ್ಲದ ಪಕ್ಷಗಳನ್ನು ನೋಂದಾಯಿಸುವುದಿಲ್ಲ. ಇದು ಕೋಮುವಾದಿಯಾಗಿದ್ದರೆ, ಚುನಾವಣಾ ಆಯೋಗವು ಪಕ್ಷದ ನೋಂದಣಿಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಪ್ರೊ.ವಲ್ಲಭ್ ಹೇಳಿದ್ದಾರೆ.