ವಾರಣಾಸಿ:ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಗೆ ಆಗಮಿಸಿದ್ದಾರೆ. ಇಲ್ಲಿ ನಡೆಯುತ್ತಿರುವ 'ಕಿಸಾನ್ ನ್ಯಾಯ್ ರ್ಯಾಲಿ' ಯನ್ನು ಉದ್ದೇಶಿಸಿ ಅವರು ಮಾತನಾಡಿದ್ರು.
ಇದಕ್ಕೂ ಮುನ್ನ ಪ್ರಿಯಾಂಕಾ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಳಿಕ, ರೊಹನಿಯಾದ ಜಗತ್ಪುರ್ ಇಂಟರ್ ಕಾಲೇಜಿನ ಮೈದಾನದಲ್ಲಿ ನಡೆದ ಕಿಸಾನ್ ನ್ಯಾಯ ರ್ಯಾಲಿಯಲ್ಲಿ ಪಾಲ್ಗೊಂಡು ಲಖಿಂಪುರ್ ಖೇರಿಯ ಹಿಂಸಾಚಾರ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯೋಗಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಧಾನಿಯವರ ಲಕ್ನೋ ಭೇಟಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ಅವರು, ಪ್ರಧಾನಿ ಮೋದಿ ಲಕ್ನೋಗೆ ಬಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಬಹುದು. ಆದರೆ ಸ್ವಲ್ಪ ದೂರ ಪ್ರಯಾಣಿಸಿ ರೈತರನ್ನು ಭೇಟಿಯಾಗಲು ಆಗುವುದಿಲ್ಲವಾ ಎಂದು ಪ್ರಶ್ನಿಸಿದರು. ದೇಶದ ರೈತರನ್ನು ಪ್ರಧಾನಿ ಚಳವಳಿಗಾರರು ಎಂದು ಕರೆಯುತ್ತಾರೆ. ಪಿಎಂ ಪ್ರಪಂಚವನ್ನು ಸುತ್ತಾಡಬಹುದು, ಆದರೆ ದೆಹಲಿಯ ಗಡಿಯಲ್ಲಿ ಕುಳಿತ ರೈತರೊಂದಿಗೆ ಮಾತನಾಡಲು ಅವರಿಗೆ ಸಮಯವಿಲ್ಲವೆಂದು ಟೀಕಾಪ್ರಹಾರ ನಡೆಸಿದರು.
ತನ್ನನ್ನು ಗಂಗೆಯ ಮಗನೆಂದು ಕರೆದುಕೊಳ್ಳುವ ಪ್ರಧಾನಿ ಗಂಗಾ ಪುತ್ರರನ್ನು(ರೈತರು) ಅವಮಾನಿಸಿದ್ದಾರೆ. ಗಂಗಾ ನೀರಿನಿಂದ ತಮ್ಮ ಬೆಳೆಗಳಿಗೆ ನೀರುಣಿಸುವ ರೈತರನ್ನು ಅವರು ಅಪಹಾಸ್ಯ ಮಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಣದುಬ್ಬರವು ಆಕಾಶವನ್ನು ಮುಟ್ಟುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.