ನವದೆಹಲಿ:ಮುಂಬರುವಲೋಕಸಭೆ ಚುನಾವಣೆಗೆ ಈಗನಿಂದಲೇ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ತೆಲಂಗಾಣ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾಗಳಲ್ಲಿ ಪ್ರದೇಶ ಚುನಾವಣಾ ಸಮಿತಿಗಳನ್ನು ರಚಿಸಿದೆ. ಮಧ್ಯಪ್ರದೇಶದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯನ್ನೂ ರಚಿಸಿದೆ. ಇವೆಲ್ಲವೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಲಾಗಿದೆ.
ರಾಜಸ್ಥಾನ ಸಮಿತಿ:ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಹೇಂದ್ರಜೀತ್ ಸಿಂಗ್ ಮಾಳವೀಯ, ಮೋಹನ್ ಪ್ರಕಾಶ್, ಸಿ.ಪಿ.ಜೋಶಿ, ಹರೀಶ್ ಚೌಧರಿ, ರಾಮಲಾಲ್ ಜಾಟ್ ಸೇರಿದಂತೆ ಹಲವರು ಇದ್ದಾರೆ.
ಕೇರಳ ಸಮಿತಿ:ಕೇರಳದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಇರಾದೆಯೊಂದಿಗೆ ಕೆ.ಸುಧಾಕರ್ ಅವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರೆ, ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಕೆ.ಸಿ.ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ವಯಲಾರ್ ರವಿ, ವಿ.ಡಿ.ಸತೀಶನ್, ಕೆ.ಸುರೇಶ್, ಶಶಿ ತರೂರ್ ಮತ್ತು ಮುಲ್ಲಪಲ್ಲಿ ರಾಮಚಂದ್ರನ್ ಸೇರಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‌ಎಸ್‌ಯುಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು ಮತ್ತು ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.
ತೆಲಂಗಾಣ ಸಮಿತಿ:ತೆಲಂಗಾಣದಲ್ಲಿ ಅಧಿಕಾರ ಹಿಡಿದಿರುವ ಕೈ ಪಕ್ಷ ಲೋಕಸಭೆಯಲ್ಲೂ ಪ್ರಭಾವ ಮುಂದುವರಿಸಲು, ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಉಪಮುಖ್ಯಮಂತ್ರಿ ಭಟ್ಟಿವಿಕ್ರಮಾರ್ಕ ಮಲ್ಲು ಸದಸ್ಯರಾಗಿ, ಉತ್ತಮ್ ಕುಮಾರ್ ರೆಡ್ಡಿ ಮತ್ತು ವಿ.ಹನುಮಂತ ರಾವ್ ಸಮಿತಿಯಲ್ಲಿದ್ದಾರೆ.