ನವದೆಹಲಿ: ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನೆರೆ ರಾಜ್ಯ ಕರ್ನಾಟಕ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೈ ಪಡೆಯು ಕರ್ನಾಟಕದಲ್ಲಿ ಅಳವಡಿಸಿರುವ ಕಾರ್ಯತಂತ್ರವನ್ನೇ ತೆಲಂಗಾಣದಲ್ಲೂ ಅನುಸರಿಸಲು ಮುಂದಾಗಿದೆ. ಈ ಮೂಲಕ ಆಡಳಿತಾರೂಢ ಬಿಆರ್‌ಎಸ್‌ನ ಹಲವಾರು ನಾಯಕರನ್ನು ಸೆಳೆಯಲು ಯೋಜಿಸುತ್ತಿದೆ. ಕರ್ನಾಟಕದ ಗೆಲುವಿನ ಪ್ರಭಾವ ನೆರೆಯ ರಾಜ್ಯದಲ್ಲೂ ಬೀರಲಿದೆ ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.
ಕರ್ನಾಟಕ ಚುನಾವಣೆಗೂ ಮುನ್ನ ಬಿಜೆಪಿ ಅಧಿಕಾರದ ಚುಕ್ಕಾಣಿ ಕಳೆದುಕೊಳ್ಳುತ್ತಿದೆ ಎಂದು ಗೊತ್ತಾಗಿ ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ತೆಲಂಗಾಣದಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ಗಮನಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ಬದಲಾಯಿಸಲು ಸಿದ್ಧರಿರುವ ಪ್ರಮುಖ ಬಿಆರ್‌ಎಸ್ ನಾಯಕರೊಂದಿಗೆ ಅವರು ಕೈ ನಾಯಕರು ಈಗಾಗಲೇ ಸಂಪರ್ಕದಲ್ಲಿದ್ದಾರೆ.
ಕಾಂಗ್ರೆಸ್ ಸೇರಲು ಇಚ್ಛಿಸುವ ಹಲವು ನಾಯಕರು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ, ಆ ನಾಯಕರು ಯಾವ ಪಕ್ಷಕ್ಕೆ ಸೇರಿದವರು ಎಂದು ನಾನು ಹೆಸರಿಸಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳು ಕ್ರಮೇಣ ತೆರೆದುಕೊಳ್ಳುತ್ತವೆ. ತೆಲಂಗಾಣದಲ್ಲೂ ಕರ್ನಾಟಕದಂತಹ ಟ್ರೆಂಡ್ ರೂಪುಗೊಳ್ಳುತ್ತಿದೆ. ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಮುಂದಿನ ಸರ್ಕಾರ ರಚಿಸುವ ವಿಶ್ವಾಸವೂ ಇದೆ ಎಂದು ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್ ರಾವ್ ಠಾಕ್ರೆ 'ಈಟಿವಿ ಭಾರತ್'ಗೆ ತಿಳಿಸಿದರು.
ವಿವಿಧ ನಾಯಕರ ಭೇಟಿ, ಮಾತುಕತೆ ಶುರು:ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗಳು ನಡೆದ ನಂತರ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಬುಧವಾರವಷ್ಟೇ ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಹಿರಿಯ ನಾಯಕ ಮತ್ತು ಸಂಸದ ವೆಂಕಟ್ ರೆಡ್ಡಿ ಅವರೊಂದಿಗೆ ಮಾಜಿ ಸಂಸದರ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ, ಗುರುವಾರ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಕ್ರಮಾಕ್ ಭಟ್ಟಿ ಅವರನ್ನೂ ಭೇಟಿಯಾಗಿ ಪಕ್ಷಕ್ಕೆ ಸೇರುವ ವಿಚಾರವಾಗಿ ಸಮಲೋಚಿಸಿದ್ದಾರೆ.
ಮತ್ತೊಂದೆಡೆ, ರೇವಂತ್ ರೆಡ್ಡಿ ಅವರು ಮಾಜಿ ಸಚಿವ ಮತ್ತು ಬಿಆರ್‌ಎಸ್ ನಾಯಕ ಜೂಪಲ್ಲಿ ಕೃಷ್ಣರಾವ್ ಅವರನ್ನೂ ಭೇಟಿಯಾಗಿದ್ದಾರೆ. ಇವರು ಶೀಘ್ರದಲ್ಲೇ ಕಾಂಗ್ರೆಸ್ ಸೇರಬಹುದು ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಜೂನ್ ಅಂತ್ಯದ ವೇಳೆಗೆ ಖಮ್ಮಂನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಬಿಆರ್‌ಎಸ್ ನಾಯಕ ಜೂಪಲ್ಲಿ ಕೃಷ್ಣರಾವ್ ಮತ್ತು ಕೆಲವು ಮಾಜಿ ಶಾಸಕರು ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.