ನವದೆಹಲಿ: ಕೇಂದ್ರ ಸರ್ಕಾರವು ಕೋವಿಡ್ ಲಸಿಕಾ ಅಭಿಯಾನದ ಮೂರನೇ ಹಂತಕ್ಕೆ ಚಾಲನೆ ನೀಡಿದ ಕೇವಲ ಒಂದು ದಿನದ ನಂತರ, ಈ ಕ್ರಮವು ಅನಾರೋಗ್ಯಕರ ಬಿಡ್ಡಿಂಗ್ ಮತ್ತು ಲಾಭದಾಯಕತೆಗೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು "ಹಿಂಜರಿತ ಮತ್ತು ಅಸಮಾನತೆಯ'' ನಿರ್ಧಾರ ಎಂದೂ ಕರೆದಿದೆ.
ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, "ಕೇಂದ್ರದ ನೀತಿಯಲ್ಲಿ ಮಾಡಿರುವ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು" ಸ್ವಾಗತಿಸಿದರು. ಆದಾಗ್ಯೂ, ಈಗ ಘೋಷಿಸಿದ ಲಸಿಕೆ ನೀತಿ ಹಿಂಜರಿತ ಮತ್ತು ಅಸಮಾನತೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.
"ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯಗಳು ಈ ನೀತಿಯಿಂದಾಗಿ ಸಾಕಷ್ಟು ಅನಾನುಕೂಲತೆ ಎದುರಿಸುತ್ತವೆ. ಜಿಎಸ್ಟಿ ಆದಾಯ ಕೊರತೆ, ಕಡಿಮೆ ತೆರಿಗೆ ಹಂಚಿಕೆ, ಅನುದಾನ ಕಡಿತ ಮುಂತಾದವುಗಳಿಂದ ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯಗಳು ಈ ಹೆಚ್ಚುವರಿ ಹೊರೆಗಳನ್ನು ಭರಿಸಬೇಕಾಗುತ್ತದೆ" ಎಂದು ಚಿದಂಬರಂ ಹೇಳಿದರು.
ಮಾರ್ಪಡಿಸಿದ ಲಸಿಕೆ ನೀತಿ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದನ್ನು ತೋರುತ್ತಿದೆ ಮತ್ತು ರಾಜ್ಯಗಳಿಗೆ ಹೊರೆಯಾಗಲಿದೆ. ಲಸಿಕೆ ತಯಾರಕರನ್ನು ಲಾಭದಾಯಕವಾಗಿಸಲು ಪ್ರೋತ್ಸಾಹಿಸುತ್ತದೆ ಮತ್ತು ರಾಜ್ಯಗಳ ನಡುವೆ ಬಡ ಮತ್ತು ಶ್ರೀಮಂತ ಭಾರತೀಯರ ನಡುವಿನ ಅಸಮಾನತೆ ಇನ್ನಷ್ಟು ಹೆಚ್ಚಿಸುತ್ತದೆ ಎಂದು ಆರೋಪಿಸಿದ್ರು. ಇದೇ ವೇಳೆ ಪಿಎಂ-ಕೇರ್ಸ್ ಅಡಿಯಲ್ಲಿ ಸಂಗ್ರಹಿಸಲಾದ ಸಾವಿರಾರು ಕೋಟಿ ಹಣವನ್ನು ಎಲ್ಲಿ ಬಳಸಲಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ" ಎಂದು ಅವರು ಹೇಳಿದರು.
ಮಾರ್ಪಡಿಸಿದ ಲಸಿಕೆ ನೀತಿಯು ಲಸಿಕೆ ತಯಾರಕರಿಗೆ ಉತ್ಪಾದನೆಯನ್ನು ಹೆಚ್ಚಿಸಲು ಬಂಡವಾಳ ಹೂಡಿಕೆಗೆ ಹಣ ಒದಗಿಸುವುದಿಲ್ಲ ಮತ್ತು ಇತರ ದೇಶೀಯ ಲಸಿಕೆ ತಯಾರಕರಿಗೆ ಅನುಮೋದಿತ ಲಸಿಕೆಗಳನ್ನು ತಯಾರಿಸಲು ಮತ್ತು ಒಟ್ಟು ಮೊತ್ತ ಹೆಚ್ಚಿಸಲು ಕಡ್ಡಾಯ ಪರವಾನಿಗೆಗಾಗಿ ಕಾನೂನಿನಲ್ಲಿರುವ ನಿಬಂಧನೆಗಳನ್ನು ಅದು ಆಹ್ವಾನಿಸುವುದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.