ನವದೆಹಲಿ: ಉತ್ತರಪ್ರದೇಶದ ಲಖೀಂಪುರ ಖೇರಿ ರೈತರ ಹತ್ಯೆ, ಹಿಂಸಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಯೋಗ ನಾಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಎ.ಕೆ. ಆಂಟನಿ, ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಕೆಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರ ನಿಯೋಗ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ. ಆದರೆ, ಅಧ್ಯಕ್ಷರ ಕಚೇರಿಯು ಕೇವಲ ಐದು ಸದಸ್ಯರಿಗೆ ಮಾತ್ರ ಭೇಟಿ ನೀಡಲು ಅನುಮತಿ ನೀಡಿದೆ ಎಂಬ ಮಾಹಿತಿಯಿದೆ.
ಘಟನೆಗೆ ಸಂಬಂಧಿಸಿದ ಸತ್ಯಾಂಶಗಳ ಜ್ಞಾಪನಾ ಪತ್ರವನ್ನು ಕಾಂಗ್ರೆಸ್ ಸಲ್ಲಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಲಖೀಂಪುರ ಖೇರಿ ಘಟನೆಯ ಕುರಿತು ಸತ್ಯಾಂಶಗಳ ಜ್ಞಾಪನಾ ಪತ್ರವನ್ನು ಸಲ್ಲಿಸಲು ಕಾಂಗ್ರೆಸ್ ರಾಷ್ಟ್ರಪತಿಯಿಂದ ಅವಕಾಶ ಕೋರಿತ್ತು.
ಅಕ್ಟೋಬರ್ 9, 2021 ರಂದು ರಾಷ್ಟ್ರಪತಿಗಳ ಕಚೇರಿಗೆ ಬರೆದ ಪತ್ರದಲ್ಲಿ ಕೆಸಿ ವೇಣುಗೋಪಾಲ್, ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಹತ್ಯಾಕಾಂಡದ ಆಘಾತಕಾರಿ ಘಟನೆಯು ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆಲ್ಲ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಕುಟುಂಬಸ್ಥರು ಕಾರಣ ಎಂದು ಆರೋಪಿಸಿದ್ದರು.