ನವದೆಹಲಿ:ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರುವ ಸಸ್ಪೆನ್ಸ್ ಈಗಲೂ ಮುಂದುವರೆದಿದೆ. ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಪಕ್ಷ ರಚನೆ ಮಾಡಿದ್ದ ಸಮಿತಿ ಈಗಾಗಲೇ ತನ್ನ ವರದಿಯನ್ನ ಸೋನಿಯಾ ಗಾಂಧಿ ಅವರ ಕೈಗೆ ನೀಡಿದೆ. ವರದಿ ಹಸ್ತಾಂತರ ಮಾಡಿದ ಬಳಿಕ ಕೂಡ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಯ್ದು ನೋಡುವ ತಂತ್ರದ ಮೊರೆಹೋಗಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಅವರು ಕೈ ಪರವಾಗಿ ಕೆಲಸ ಮಾಡಲು ಈಗಾಗಲೇ ಒಪ್ಪಿಕೊಂಡಿದ್ದಾರೆ.
ಇದರ ಮಧ್ಯೆ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಮಿತಿ ರಚನೆ ಮಾಡಲಾಗಿದ್ದು ಇಂದೇ ಸೋನಿಯಾ ಗಾಂಧಿ ಅವರಿಗೆ ಈ ಬಗ್ಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬರುವ ಮೇ. 13ರಿಂದ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಮೂರು ದಿನಗಳ ಸಮಾವೇಶ ನಡೆಯಲಿದ್ದು, ಈ ವೇಳೆ ಇದರ ಬಗ್ಗೆ ಮಹತ್ವದ ಘೋಷಣೆ ಹೊರಹಾಕುವ ಸಾಧ್ಯತೆ ಇದೆ.