ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ತನ್ನು ಉದ್ಘಾಟಿಸಬಾರದು ಎಂದು ವಿರೋಧಿಸಿದ್ದ ಕಾಂಗ್ರೆಸ್ ಸೇರಿದಂತೆ ಕೆಲವು ವಿಪಕ್ಷಗಳು ಕಾರ್ಯಕ್ರಮದಿಂದ ದೂರ ಉಳಿದಿವೆ. ವಿರೋಧದ ನಡುವೆಯೂ ಉದ್ಘಾಟನೆ ಮಾಡಿದ ಪ್ರಧಾನಿಯನ್ನು ಕೈ ಪಕ್ಷ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಸಂಸತ್ತು ಜನರ ಧ್ವನಿ. ಅದರ ಉದ್ಘಾಟನೆಯನ್ನು ಪ್ರಧಾನಿಗಳು ರಾಜ್ಯಾಭಿಷೇಕ ಎಂದು ಭಾವಿಸಿದ್ದಾರೆ' ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ಟ್ವೀಟ್ ಮಾಡಿ, ‘ಸಂಸದೀಯ ಕಾರ್ಯವೈಖರಿ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿರುವ, ಸ್ವಯಂ ವೈಭವೀಕರಣದ ಸರ್ವಾಧಿಕಾರಿ ಪ್ರಧಾನಿ ನೂತನ ಸಂಸತ್ತನ್ನು ಲೋಕಾರ್ಪಣೆ ಮಾಡಿದ್ದಾರೆ' ಎಂದಿದ್ದಾರೆ.
ಅಲ್ಲದೇ, ಮೇ 28 ನೇ ತಾರೀಖಿನಂದು ನಡೆದ ಈ ಹಿಂದಿನ ಘಟನೆಗಳನ್ನು ನಮೂದಿಸಿರುವ ರಮೇಶ್, ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಉನ್ನತ ಮಟ್ಟಕ್ಕೆ ಏರಿಸಲು ಶ್ರಮಿಸಿದ ವ್ಯಕ್ತಿ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ 1964 ರಲ್ಲಿ ನಿಧನರಾದರು. ಅವರನ್ನು ಇದೇ ದಿನದಂದು ಅಂತಿಮ ಸಂಸ್ಕಾರ ಮಾಡಲಾಯಿತು. ಅಲ್ಲದೇ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ, ಹಿಂದು ವಿಚಾರವಾದಿ ವಿ.ಡಿ.ಸಾವರ್ಕರ್ ಅವರ ಜನ್ಮದಿನವೂ (1883 ರಲ್ಲಿ) ಇಂದೇ ಆಗಿದೆ ಎಂದು ಬರೆದುಕೊಂಡಿದ್ದಾರೆ.
'ರಾಷ್ಟ್ರಪತಿಗೆ ಅವಮಾನ':ಇದಲ್ಲದೇ, ದೇಶದ ಮೊದಲ ಆದಿವಾಸಿ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅವರನ್ನು ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅವಮಾನಿಸಲಾಗಿದೆ. ರಾಷ್ಟ್ರಪತಿಗಳ ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸಲು ಮತ್ತು ಹೊಸ ಸಂಸತ್ ಭವನವನ್ನು ಉದ್ಘಾಟಿಸಲು ಅನುಮತಿಸುವುದಿಲ್ಲ ಎಂದರೆ ಏನರ್ಥ ಎಂದು ರಮೇಶ್ ಪ್ರಶ್ನಿಸಿದ್ದಾರೆ.