ನವದೆಹಲಿ:ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್ "ಬೋಗಸ್" ಎಂದು ಜರಿದಿದೆ. ಕಳೆದ ಚುನಾವಣೆ ವೇಳೆ ನೀಡಿದ್ದ ಶೇ.90 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಈ ಬಾರಿಯ ಪ್ರಣಾಳಿಕೆಯೂ ನಕಲಿಯಾಗಿದೆ ಎಂದು ಟೀಕಿಸಿದೆ.
ವರ್ಷದಲ್ಲಿ 3 ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ ಎಂದು ಕರ್ನಾಟಕ ಬಿಜೆಪಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ. ಕೇಂದ್ರ ಸರ್ಕಾರವು ಮಾತ್ರ ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಇದರಿಂದ ಜನರು ಹಣದುಬ್ಬರದಿಂದ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
2018 ರ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಶೇ.90 ರಷ್ಟನ್ನು ಈಡೇರಿಸಿಲ್ಲ. ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಇದರ ಮಧ್ಯೆ ಪಕ್ಷ ಮತ್ತೊಂದು ನಕಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದು ದಿಗಿಲು ಮೂಡಿಸುವ ಸಂಗತಿ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್ ಹೇಳಿದ್ದಾರೆ.
ಕಳೆದ ವರ್ಷ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಒಂದು ವರ್ಷದಲ್ಲಿ 2 ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ ಎಂದು ಘೋಷಿಸಲಾಗಿತ್ತು. ಗೋವಾ ವಿಧಾನಸಭಾ ಚುನಾವಣೆಯಲ್ಲೂ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ, ಅದು ಈವರೆಗೂ ಜಾರಿ ಮಾಡಿಲ್ಲ. ಇಲ್ಲೂ ಕೂಡ ಅದೇ ಭರವಸೆ ನೀಡಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಸುಳ್ಳಿನ ಕಂತೆ:ಬಿಜೆಪಿ ಕರ್ನಾಟಕದ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಭರವಸೆ ಸುಳ್ಳಿನ ಕಂತೆಯಾಗಿದೆ ಎಂಬುದನ್ನು ಕರ್ನಾಟಕದ ಜನರು ತಿಳಿದುಕೊಳ್ಳಬೇಕು. ಗೋವಾ ಮುಖ್ಯಮಂತ್ರಿ ಕೂಡ ಇದೇ ರೀತಿಯ ಭರವಸೆ ನೀಡಿ ಅದರಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಯ ಡಿಎನ್‌ಎಯಲ್ಲಿಯೇ ಸುಳ್ಳು ಇದೆ ಎಂದು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಆರೋಪಿಸಿದ್ದಾರೆ.