ರತ್ಲಾಮ್(ಮಧ್ಯಪ್ರದೇಶ):ಇಲ್ಲಿನಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರಸ್ ಸಕ್ಲೇಚಾ ಎಂಬವರು ಚುನಾವಣೆಗೂ ಮುನ್ನ ತನ್ನ ಗೆಲುವಿಗಾಗಿ ವೃದ್ಧ ವ್ಯಕ್ತಿಯೊಬ್ಬರಿಂದ ಚಪ್ಪಲಿಯಿಂದ ಹೊಡೆಸಿಕೊಂಡರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶ ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಹಾಗು ಮಾಜಿ ಶಾಸಕನ ವಿಡಿಯೋವೊಂದು ಎಲ್ಲೆಡೆ ಭಾರಿ ಸದ್ದಾಗುತ್ತಿದೆ. ರತ್ಲಾಮ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದ ಪರಸ್ ಸಕ್ಲೇಚಾ, ಇಲ್ಲಿ 'ದೇವಮಾನವ'ನೆಂದೇ ಕರೆಯುವ ವೃದ್ಧನ ಕೈಯಿಂದ ತಾವೇ ಹೊಸ ಚಪ್ಪಲಿ ಕೊಟ್ಟು ಹೊಡೆಸಿಕೊಂಡರು. ಇವರಿಂದ ಚಪ್ಪಲಿಯಿಂದ ಏಟು ತಿಂದರೆ ಅದೃಷ್ಟ ಖುಲಾಯಿಸುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ನಂಬಿರುವುದಾಗಿ ವರದಿಯಾಗಿದೆ. ಕೈ ಅಭ್ಯರ್ಥಿಗೆ ಚಪ್ಪಲಿಯಿಂದ ಹೊಡೆದ ವ್ಯಕ್ತಿಯನ್ನು ಜನತೆ ಫಕೀರ ಬಾಬಾ, ದೇವರು ಎಂದೆಲ್ಲ ಕರೆದು ಆರ್ಶಿವಾದ ಪಡೆಯುತ್ತಾರೆ.
ಚಪ್ಪಲಿ ಹೊಡೆತವೇ ಆಶೀರ್ವಾದ: ಈ ವೃದ್ಧ ರತ್ಲಾಮ್‌ನ ಮೋವ್ ರಸ್ತೆಯ ದರ್ಗಾದಲ್ಲಿ ವಾಸಿಸುತ್ತಿದ್ದಾರೆ. ಸ್ಥಳೀಯರು ಈ ಹಿರಿಕನನ್ನು ಪ್ರೀತಿಯಿಂದ ಅಬ್ಬಾ ಎಂದೂ ಕರೆಯುತ್ತಿದ್ದಾರೆ. ಇವರ ಬಳಿ ಅನೇಕರು ಆಶೀರ್ವಾದ ಪಡೆಯಲು ಬರುತ್ತಾರೆ. ವೃದ್ಧನಿಗೆ ಕಾಣಿಕೆಯಾಗಿ ಲುಂಗಿ ಮತ್ತು ಪಾದರಕ್ಷೆಗಳನ್ನು ಒಪ್ಪಿಸುತ್ತಾರೆ. ಭಕ್ತರು ನೀಡುವ ಕಾಣಿಕೆಗಳ ಪೈಕಿ ಕೆಲವನ್ನು ಸ್ವೀಕರಿಸಿದರೆ ಕೆಲವನ್ನು ಎಸೆದು ಬಿಡುತ್ತಾರೆ. ಆ ಬಳಿಕ ತನ್ನ ಬಳಿ ಬಂದಿರುವ ಭಕ್ತರಿಗೆ ಚಪ್ಪಲಿಯಿಂದ ಏಟು ನೀಡುತ್ತಾರೆ. ಫಕೀರ ಬಾಬ ಅವರಿಂದ ಚಪ್ಪಲಿಯಿಂದ ಹೊಡೆಸಿಕೊಂಡರೆ ಶುಭವಾಗುತ್ತದೆ ಎಂಬುದು ಜನರ ನಂಬಿಕೆ.