ಮಲಪ್ಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ನೀಲಂಬೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ವಿ.ಪ್ರಕಾಶ್ (55) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಲಪ್ಪುರಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿದ್ದ ಪ್ರಕಾಶ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಡಿಎಫ್ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ನಿಂದ ಕಣಕ್ಕಿಳಿದಿದ್ದರು. ಹೃದಯ ಸಂಬಂಧ ಸಮಸ್ಯೆ ಎದುರಾದ ಕಾರಣ ಅವರನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೇ 2 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಪ್ರಕಾಶ್ ಅವರ ಸಾವಿಗೆ ಕಾಂಗ್ರೆಸ್ ಮುಖಂಡರು ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
"ಮಲಪ್ಪುರಂ ಡಿಸಿಸಿ ಅಧ್ಯಕ್ಷ ಮತ್ತು ಯುಡಿಎಫ್ ನಿಲಂಬೂರ್ ಅಭ್ಯರ್ಥಿ ವಿ.ವಿ.ಪ್ರಕಾಶ್ ಜೀ ಅವರ ಅಕಾಲಿಕ ನಿಧನ ಅತ್ಯಂತ ದುರಂತದ ಸಂಗತಿಯಾಗಿದೆ. ಅವರ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಎಂದಿಗೂ ಸ್ಮರಿಸಲಾಗುವುದು. ಸದಾ ಜನರಿಗಾಗಿ ಸಹಾಯ ಮಾಡಲು ಅವರು ಸಿದ್ಧರಾಗಿರುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.