ನವದೆಹಲಿ:ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪಕ್ಷದ ಲೋಕಸಭೆ ಸಂಸದರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತುಗೊಳಿಸಿರುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ. ಪಶ್ಚಿಮ ಬಂಗಾಳದ ಬರ್ಹಾಂಪೋರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಪದೇ ಪದೆ ಸದನದ ನಿಯಮಾವಳಿಗಳನ್ನ ಉಲ್ಲಂಘಿಸುತ್ತಿದ್ದಾರೆ ಹಾಗೂ ಅಶಿಸ್ತು ತೋರಿಸುತ್ತಿದ್ದಾರೆ ಎಂಬ ಕಾರಣದಿಂದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ಅಮಾನತು ನಿರ್ಣಯ ಮಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವರು ಮಾತನಾಡುವಾಗ ಅಥವಾ ಚರ್ಚೆ ನಡೆಯುತ್ತಿರುವಾಗ ಚೌಧರಿ ಅವರು ಸದನಕ್ಕೆ ಅಡ್ಡಿಪಡಿಸುತ್ತಾರೆ ಎಂದು ಜೋಶಿ ನಿರ್ಣಯದಲ್ಲಿ ಆರೋಪಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಡಿಸಿದ ನಿರ್ಣಯವನ್ನು ಸದನವು ಧ್ವನಿ ಮತದ ಮೂಲಕ ಅಂಗೀಕರಿಸಿತ್ತು.
ಮಣಿಪುರ ಹಿಂಸಾಚಾರದ ವಿಷಯದ ಕುರಿತು ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದರು. ಅದರಂತೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಹ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅಮಾನತು ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ನೀರವ್ ಎಂದರೆ ಮೌನವಾಗಿರುವುದು ಎಂದರ್ಥ. ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸುವುದು ನಮ್ಮ ಉದ್ದೇಶವಲ್ಲ ಎಂದು ಹೇಳಿದ್ದಾರೆ.