ನವ ದೆಹಲಿ: 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಾಂಸ್ಥಿಕ ಬದಲಾವಣೆಗಳನ್ನು ಮಾಡಲು ಕಾಂಗ್ರೆಸ್ ಮುಂದಾಗಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಲಹೆ ಮೇರೆಗೆ ಪಕ್ಷಕ್ಕೆ ಹೊಸ ಸ್ಪರ್ಶ ನೀಡಲು ಸಿದ್ಧತೆಗಳನ್ನು ನಡಸಿದೆ.
ಜುಲೈ ಆರಂಭದಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಪ್ರಶಾಂತ್ ಕಿಶೋರ್ ನಡೆಸಿದ್ದ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕಿಶೋರ್ ಅವರು ಬಿಜೆಪಿ ಚುನಾವಣೆಯ ವಿರುದ್ಧ ಹೋರಾಡಲು ಸಿದ್ಧರಾಗುವಂತೆ ಸೂಚಿಸಿದ್ದರು.
ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರವ ಸಂಬಂಧದ ಯೋಜನೆ ಕುರಿತು ಪಕ್ಷದ ಇತರ ಹಿರಿಯ ನಾಯಕರೊಂದಿಗೂ ಪಿಕೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ) ಸದಸ್ಯರ ತಂಡ ಈ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸುತ್ತಿದೆ. ರಾಹುಲ್ ಗಾಂಧಿ ಕೂಡ ಪಕ್ಷದ ಕೆಲವು ಹಿರಿಯ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಗುಸುಗುಸು ಕೂಡ ಇದೆ. ಪಕ್ಷಕ್ಕೆ ಸೇರುವ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ. ಪಕ್ಷದ ಸದಸ್ಯರು ಈ ವಿಷಯದ ಬಗ್ಗೆ ಹೆಚ್ಚು ಮಾತನಾಡದಿರಲು ಸೂಚನೆ ಇದೆ ಎನ್ನಲಾಗುತ್ತಿದೆ. ಸಂಘಟನೆಯ ಬದಲಾವಣೆಗಳ ವಿಷಯವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಪಕ್ಷ ಸಂಘಟನೆಗೆ ಒತ್ತು: ವಿಭಾಗೀಯ ಮಟ್ಟದ ಸಭೆ ನಡೆಸಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷದಲ್ಲಿನ ಬದಲಾವಣೆಗಳಿಗಾಗಿ ಸಭೆ, ಚರ್ಚೆಗಳು ನಡೆಯುತ್ತಿವೆ. ಆದರೆ ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರುವ ವಿಷಯವು ಅವರ ಆಯ್ಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ಅವರು ಸೇರಲು ಬಯಸಿದರೆ, ಅವರ ಆಸೆಯನ್ನು ಕಾಂಗ್ರೆಸ್ ಪೂರೈಸಲು ಸಾಧ್ಯವೇ ಎಂದು ಕೈ ನಾಯಕರೊಬ್ಬರು ಹೇಳಿದ್ದಾರೆ.
ವರದಿ ಪ್ರಕಾರ, ಕಿಶೋರ್ ಸಕ್ರಿಯ ರಾಜಕೀಯಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲ ಕಾಂಗ್ರೆಸ್ ನಾಯಕರು ಅವರ ಸೇರ್ಪಡೆಯಿಂದ ಪಕ್ಷ ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಮತ್ತೊಂದೆಡೆ, ಕೆಲವು ನಾಯಕರು ಹೊರಗಿನವರಿಗೆ ಪ್ರಮುಖ ಪಾತ್ರ ನೀಡುವುದರಿಂದ ಪಕ್ಷದಲ್ಲಿ ಆಂತರಿಕ ಗೊಂದಲಕ್ಕೆ ಕಾರಣವಾಗಬಹುದು. ಆದರೆ ಕಾಂಗ್ರೆಸ್ ಹೈಕಮಾಂಡ್‌ನ ಪ್ರತಿಯೊಂದು ನಿರ್ಧಾರವನ್ನು ಒಪ್ಪಿಕೊಳ್ಳಲಾಗುವುದು ಎಂದು ಒತ್ತಿ ಹೇಳಿದರು.
ಚುನಾವಣಾ ಕಾರ್ಯತಂತ್ರ, ಸಮನ್ವಯ ಮತ್ತು ಮೈತ್ರಿ ನಿರ್ಧಾರಗಳ ಬಗ್ಗೆ ಪ್ರಶಾಂತ್ ಕಿಶೋರ್ ಹಲವು ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಪಕ್ಷವು ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
2024 ರ ಚುನಾವಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪರ್ಯಾಯ ಮೈತ್ರಿಯ ಹುಡುಕಾಟವನ್ನು ಆರಂಭಿಸಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ. ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ಪ್ರಯತ್ನಗಳು ಆರಂಭಿಸಿವೆ. ವಿರೋಧ ಪಕ್ಷಗಳು ಒಂದಾಗಲು ಸಿದ್ಧತೆಗಳು ಆರಂಭವಾಗಿವೆ. ಇದು ಇಂದಿನ ಅಗತ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.