ಬ್ರೇಕ್‌ನ ನಂತರ 2ನೇ ದಿನದ ಭಾರತ್ ಜೋಡೋ ಪುನಾರಂಭ ಬಾಗ್‌ಪತ್ (ಉತ್ತರ ಪ್ರದೇಶ):ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಊದಿರುವ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶದಲ್ಲಿ ಇಂದು ಮುಂದುವರಿದಿದೆ. 9 ದಿನಗಳ ವಿರಾಮದ ನಂತರ ಯಾತ್ರೆ ನಿನ್ನೆ ಪುನಾರಂಭಗೊಂಡಿದ್ದು, ಕಾರ್ಯಕರ್ತರು ತಮ್ಮ ನಾಯಕನ ಜೊತೆಗೆ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಹೆಚ್ಚಿನ ಜನ ಬೆಂಬಲ ಯಾತ್ರೆಗೆ ಸಿಗುತ್ತಿದೆ.
ರಾಹುಲ್ ಗಾಂಧಿ ಸಾರಥ್ಯದ ಯಾತ್ರೆಯಲ್ಲಿ ಸಹೋದರಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೆಜ್ಜೆ ಹಾಕಿದರು. 7 ಕಿಮೀ ನಡೆದ ಬಳಿಕ ಅವರು ಮತ್ತೆ ದೆಹಲಿಗೆ ಮರಳಿದ್ದಾರೆ. ಉಳಿದ ನಾಯಕರ ಜೊತೆಗೆ ರಾಹುಲ್ ಯಾತ್ರೆಯನ್ನು ಸಾಗಿಸುತ್ತಿದ್ದಾರೆ. ಸದ್ಯ ಯಾತ್ರೆ ಉತ್ತರಪ್ರದೇಶದ ಬಾಗ್ಪತ್ನ ಮಾವಿಕಾಲದ ಮೂಲಕ ಹರಿಯಾಣದ ಕಡೆಗೆ ಸಾಗುತ್ತಿದೆ. ಇನ್ನೆರಡು ದಿನ ಉತ್ತರಪ್ರದೇಶದಲ್ಲಿ ಯಾತ್ರೆ ಸಂಚರಿಸಲಿದೆ. ಬಳಿಕ ಶಾಮ್ಲಿಯ ಮೂಲಕ ಹರಿಯಾಣದ ಪಾಣಿಪತ್ ಪ್ರವೇಶಿಸಲಿದೆ.
ಕಾಂಗ್ರೆಸ್‌ನ ಬಾಗ್‌ಪತ್ ಜಿಲ್ಲಾ ಘಟಕದ ಮುಖ್ಯಸ್ಥ ಯೂನಸ್ ಚೌಧರಿ ಮಾತನಾಡಿ, 'ಯಾತ್ರೆಯು ಮಾವಿಕಲನ್ ಗ್ರಾಮದಿಂದ ಪ್ರಾರಂಭವಾಯಿತು. ಮಧ್ಯಾಹ್ನ ಗುಫಾ ದೇವಸ್ಥಾನವನ್ನು ತಲುಪುತ್ತದೆ. ಅಲ್ಲಿ ಸ್ವಲ್ಪ ಸಮಯದ ವಿಶ್ರಾಂತಿಯ ಬಳಿಕ ಸರೂರ್‌ಪುರಕಲನ್ ಗ್ರಾಮದ ಮೂಲಕ ಬರೌತ್ ಪಟ್ಟಣ ಪ್ರವೇಶಿಸಲಿದೆ. ಶಾಮ್ಲಿ ಜಿಲ್ಲೆಗೆ ಹೊರಡುವ ಮೊದಲು ರಾಹುಲ್ ಗಾಂಧಿ ಅವರು ನುಕ್ಕಡ್ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ' ಎಂದು ತಿಳಿಸಿದರು.
ಜ.30 ರಂದು ಜಮ್ಮು ಕಾಶ್ಮೀರದಲ್ಲಿ ಸಂಪನ್ನ: ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಂಪನ್ನ ಕಾಣಲಿದೆ. ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಯಾತ್ರೆ ಕೊನೆಗೊಳಿಸಲಿದ್ದಾರೆ. 111 ದಿನಗಳಿಂದ ಸಾಗಿರುವ ಯಾತ್ರೆಯು 3,122 ಕಿ.ಮೀ ಕ್ರಮಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ 49 ಜಿಲ್ಲೆಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ದಾಟಿ ಬಂದಿದೆ.
ಜೋಡೋ ಯಾತ್ರೆ ಬಳಿಕ ಅಭಿಯಾನ:ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಹಾಥ್ ಸೇ ಹಾಥ್ ಜೋಡೋ ಅಭಿಯಾನ ನಡೆಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ಯಾತ್ರೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಿಳಿಸುವ ಸಲುವಾಗಿ ಜನ ಬೆಂಬಲವನ್ನು ಪಡೆದುಕೊಳ್ಳಲು ಪ್ರಿಯಾಂಕಾ ಈ ಅಭಿಯಾನ ನಡೆಸಲಿದ್ದಾರೆ. ವಿಶೇಷವಾಗಿ, ಮಹಿಳೆಯರನ್ನೇ ಕೇಂದ್ರೀಕರಿಸಿಕೊಂಡು ಈ ಅಭಿಯಾನ ನಡೆಸಲು ಪಕ್ಷ ಉದ್ದೇಶಿಸಿದೆ. ಅಭಿಯಾನ ಎಷ್ಟು ದಿನಗಳವರೆಗೆ ನಡೆಯಲಿದೆ ಎಂಬುದನ್ನು ಇನ್ನಷ್ಟೇ ಪಕ್ಷ ಘೋಷಿಸಬೇಕಿದೆ.
ಅತಿ ಉದ್ದದ ಯಾತ್ರೆ ಎಂಬ ದಾಖಲೆ ಸಾಧ್ಯತೆ:ರಾಹುಲ್ ಗಾಂಧಿ ಅವರು ಅವಿರತವಾಗಿ ನಡೆಸುತ್ತಿರುವ ಈ ಭಾರತ ಜೋಡೋ ಯಾತ್ರೆಯು ದೇಶದ ಇತಿಹಾಸದಲ್ಲಿಯೇ ಅತಿ ಉದ್ದದ ಯಾತ್ರೆಯಾಗಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಹಿಂದೆ ನಡೆದ ಯಾವುದೇ ಯಾತ್ರೆಗಳು ಇಷ್ಟುದ್ದ ಸಾಗಿಬಂದಿಲ್ಲ. ಇದರ ಮೂಲಕ ರಾಹುಲ್ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮತ್ತು ಬಿಜೆಪಿಯ ವಿರುದ್ಧ ಜನರನ್ನು ಒಗ್ಗೂಡಿಸುವ ಗುರಿ ಹೊಂದಿದ್ದಾರೆ ಎಂದು ಪಕ್ಷ ಹೇಳಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಕ್ ಅಬ್ದುಲ್ಲಾ ಈಚೆಗಷ್ಟೇ ಭಾಗಿಯಾಗಿದ್ದರು. ಯಾತ್ರೆಯಲ್ಲಿ ಭಾಗವಹಿಸಿದ ಫಾರೂಕ್ ಅಬ್ದುಲ್ಲಾ ಅವರನ್ನು ರಾಹುಲ್ ಗಾಂಧಿ ತಬ್ಬಿಕೊಳ್ಳುವ ಮೂಲಕ ಸ್ವಾಗತಿಸಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇದ್ದರು.
ರಾಮಮಂದಿರ ಅರ್ಚಕರಿಂದ ಶುಭಾಶೀರ್ವಾದ:ಭಾರತ್ ಜೋಡೋ ಯಾತ್ರೆಯನ್ನು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ವಾಗತಿಸಿದ್ದರು. ರಾಹುಲ್ ಗಾಂಧಿಗೆ ಪತ್ರ ಬರೆದು, ಶ್ರೀರಾಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಅವರು ಶುಭ ಹಾರೈಸಿದ್ದರು. 'ನೀವು ದೇಶಕ್ಕಾಗಿ ಮಾಡುವ ಕೆಲಸ ಎಲ್ಲರಿಗೂ ಪ್ರಯೋಜನಕಾರಿ. ನಿಮ್ಮ ದೀರ್ಘಾಯುಷ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ನೀವು ಮಾಡುತ್ತಿರುವ ಕೆಲಸಗಳು ಯಶಸ್ವಿಯಾಗಲಿ. ಶ್ರೀರಾಮನ ಆಶೀರ್ವಾದ ನಿಮ್ಮ ಮೇಲಿರಲಿ' ಎಂದು ದಾಸ್ ಹರಸಿದ್ದರು.
ಇದನ್ನೂ ಓದಿ:ಭಾರತ್ ಜೋಡೋ ಬಳಿಕ ಹಾಥ್ ಸೇ ಹಾಥ್ ಜೋಡೋ ಅಭಿಯಾನ: ಪ್ರಿಯಾಂಕಾ ಗಾಂಧಿ ನೇತೃತ್ವ