ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ಕಾಂಗ್ರೆಸ್ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಕನ್ಹಯ್ಯಾ ಕುಮಾರ್ ಅವರನ್ನು ಎನ್‌ಎಸ್‌ಯುಐನ ಎಐಸಿಸಿ ಉಸ್ತುವಾರಿಯಾಗಿ ನೇಮಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಭಾರತದ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (NSUI) ನೀರಜ್ ಕುಂದನ್ ಅವರ ನೇತೃತ್ವದಲ್ಲಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ನಿವಾಸಿಯಾದ ಕನ್ಹಯ್ಯಾ ಕುಮಾರ್, ದೆಹಲಿ ಅಥವಾ ಬಿಹಾರ್ ರಾಜ್ಯದ ಉಸ್ತುವಾರಿಯಂತಹ ಕೆಲವು ಪ್ರಮುಖ ಹುದ್ದೆಯ ಜವಾಬ್ದಾರಿಯನ್ನು ಪಕ್ಷ ನೀಡಬಹುದು ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಕನ್ಹಯ್ಯ ಅವರ ರಾಜಕೀಯ ಅನುಭವವನ್ನು ಪರಿಗಣಿಸಿ, ಪಕ್ಷದ ಉನ್ನತ ಮಟ್ಟದ ನಾಯಕರು ಎನ್‌ಎಸ್‌ಯುಐ ಉಸ್ತುವಾರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಕನ್ಹಯ್ಯ ಅವರು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ ಕಾರಣದಿಂದ ಪಕ್ಷವು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ : 'ಕನ್ನಯ್ಯ ಕುಮಾರ್ ಮತ್ತೊಬ್ಬ ಸಿಧುವಿನಂತೆ ಕಾಂಗ್ರೆಸ್ ನಾಶ ಮಾಡಲಿದ್ದಾರೆ'
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಕನ್ಹಯ್ಯ ಕುಮಾರ್ ಭಾಗವಹಿಸಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದ್ದರು. ಮಾಜಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕರಾದ ಕುಮಾರ್, ಸೆಪ್ಟೆಂಬರ್ 2021ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.