ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಒತ್ತಾಯಿಸಿದ್ದು, ರಾಜ್ಯ ಸರ್ಕಾರದ ಮೇಲೆ ಗುತ್ತಿಗೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಕುರಿತು ಪ್ರಧಾನಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತ ನಡೆಸುತ್ತಿದ್ದು, ಆ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ಪ್ರಧಾನಿ ಆರೋಪಿಸಿದ್ದರು. ಈಗ 50,000 ಸದಸ್ಯರನ್ನು ಒಳಗೊಂಡಿರುವ ಗುತ್ತಿಗೆದಾರರ ಸಂಘವು ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದೆ. ತಮ್ಮದೇ ಪಕ್ಷದ ಕಾರ್ಯಕರ್ತರ ದೂರಿನ ಬಗ್ಗೆಯೂ ಬಿಜೆಪಿ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕರ್ನಾಟಕದ ಭ್ರಷ್ಟ ಸರ್ಕಾರಕ್ಕೆ ಶಿಕ್ಷೆಯಾಗುತ್ತದೋ? ಇಲ್ಲವೋ? ಎಂಬುದನ್ನು ಪ್ರಧಾನಿಯವರು ದೇಶಕ್ಕೆ ತಿಳಿಸಬೇಕು’ ಎಂದು ಡಾ.ಎಲ್.ಹನುಮಂತಯ್ಯ ಹೇಳಿದರು.
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದಲ್ಲಿನ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಗುತ್ತಿಗೆ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದ ಹನುಮಂತಯ್ಯ, ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯತ್ನಲ್ಲಿ 4 ಕೋಟಿ ರೂಪಾಯಿಗಳ ಗುತ್ತಿಗೆ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ:ಕಾಮಗಾರಿಯೊಂದಕ್ಕೆ ಸಚಿವ ಈಶ್ವರಪ್ಪ ಅವರು ಶೇಕಡಾ 40ರಷ್ಟು ಕಮಿಷನ್ ಕೇಳಿದ್ದು, ಗುತ್ತಿಗೆ ಕಾಮಗಾರಿ ಮುಗಿದ ನಂತರ ಕಮಿಷನ್ ನೀಡುವಂತೆ ಸಂತೋಷ್ ಪಾಟೀಲ್ಗೆ ಕೇಳಿದ್ದಾರೆ. ಕಾಮಗಾರಿ ಮುಗಿದ ನಂತರ ಸಚಿವರ ಆಪ್ತರು ಕಮಿಷನ್ ನೀಡುವಂತೆ ಕೇಳಿದಾಗ ಸಂತೋಷ್ ಪಾಟೀಲ್ 15 ಲಕ್ಷ ರೂಪಾಯಿ ನೀಡಿದ್ದಾರೆ. ಆದರೆ, ಅದನ್ನು ಸಚಿವರ ಆಪ್ತರು ಸ್ವೀಕರಿಸಲಿಲ್ಲ. ಬದಲಿಗೆ ಕಾಮಗಾರಿಯ ಶೇಕಡಾ 40ರಷ್ಟು ಕಮಿಷನ್ ನೀಡಲು ಒತ್ತಾಯಿಸಿದ್ದಾರೆ ಎಂದು ಡಾ.ಹನುಮಂತಯ್ಯ ಆರೋಪಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು 80 ಬಾರಿ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ, ಸಚಿವರು ಗುತ್ತಿಗೆದಾರರನ್ನು ಭೇಟಿ ಮಾಡಿಲ್ಲ. ಆದರೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸಂತೋಷ್ ಪಾಟೀಲ್ ಹಿಂದೂ ವಾಹಿನಿ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ಈ ವಿಷಯವನ್ನು ನವದೆಹಲಿಯಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರೊಂದಿಗೆ ಪ್ರಸ್ತಾಪಿಸಿ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹನುಮಂತಯ್ಯ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭಾ ಸದಸ್ಯರಾದ ಡಾ.ಸೈಯದ್ ನಾಸೀರ್ ಹುಸೇನ್ ಮತ್ತು ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರಿ ಇಲಾಖೆಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಸಮಸ್ಯೆಯನ್ನು ಪರಿಹರಿಸಬೇಕಿದೆ. ಬಿಜೆಪಿ ಸರ್ಕಾರಗಳು ಹೆಚ್ಚು ಭ್ರಷ್ಟವಾಗಿವೆ ಎಂದು ದೇಶಕ್ಕೆ ತಿಳಿಸಲು ನಾವು ಬಯಸುತ್ತೇವೆ. ಕರ್ನಾಟಕದ ಜನರು ಬಿಜೆಪಿ ಸರ್ಕಾರದ ಭ್ರಷ್ಟತೆಯನ್ನು ಅರಿತು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕೋಟಾದ ಒಂದೂ ಮೆಡಿಕಲ್ ಸೀಟ್ ಲ್ಯಾಪ್ಸ್ ಆಗಲ್ಲ: ಸುಧಾಕರ್