ನವದೆಹಲಿ:ಛತ್ತೀಸ್‌ಗಢ ವಿಧಾನಸಭೆಯ 20 ಸ್ಥಾನಗಳಿಗೆ ನಾಳೆ (ನವೆಂಬರ್ 7) ಮೊದಲ ಹಂತದ ಚುನಾವಣೆ ನಡೆಯಲಿದ್ದು, ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರಗಳನ್ನು ಪರಿಶೀಲಿಸಿದೆ. ಬೂತ್ ಮಟ್ಟದ ತಂಡಗಳು ಗರಿಷ್ಠ ಮತದಾನವಾಗುವಂತೆ ನೋಡಿಕೊಳ್ಳಬೇಕು. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ 11 ರಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು, ಈ ಸಂಖ್ಯೆ ಹೆಚ್ಚಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದೆ.
ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ವಾರ್ ರೂಮ್‌ಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಪ್ರತಿಸ್ಪರ್ಧಿಗಳಿಂದ ಯಾವುದೇ ಅಡಚಣೆ ಉಂಟಾಗದಂತೆ ಎಚ್ಚರ ವಹಿಸಬೇಕು. ಮತದಾರರು ಕೇಂದ್ರಗಳಿಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ಬೂತ್ಮಟ್ಟದ ಸಮಿತಿಗಳಿಗೆ ನಾಯಕರು ಟಾಸ್ಕ್ ನೀಡಿದ್ದಾರೆ.
ಮಾವೋವಾದಿ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ ಬಳಿಕ ಇಲ್ಲಿ ಕ್ರಿಯಾ ಯೋಜನೆ ಜಾರಿಗೆ ತರಲಾಯಿತು. ಸ್ಥಳೀಯ ಬೂತ್ ಮಟ್ಟದ ತಂಡಗಳನ್ನು ರೂಪಿಸಲಾಯಿತು. ತರಬೇತಿ ನೀಡುವುದರ ಮೂಲಕ ಮತದಾನಕ್ಕೆ ಸಿದ್ಧತೆ ಕೈಗೊಳ್ಳಲಾಯಿತು. ಈ ಪ್ರದೇಶದಲ್ಲಿ ಸರ್ಕಾರದದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಛತ್ತೀಸ್‌ಗಢದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಸಪ್ತಗಿರಿ ಉಲಕಾ 'ಈಟಿವಿ ಭಾರತ್'ಗೆ ತಿಳಿಸಿದರು.