ನವದೆಹಲಿ: ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೆಹಲಿ ಮತ್ತು ಗುರುಗಾಂವ್ನಲ್ಲಿರುವ ಟ್ವಿಟರ್ ಕಚೇರಿಗೆ ತೆರಳಿದ್ದರು. ಇದನ್ನು 'ದಾಳಿ' ಎಂದು ಹೇಳಿರುವ ಕಾಂಗ್ರೆಸ್, ವಾಕ್ ಸ್ವಾತಂತ್ರ್ಯದ ಕೊಲೆಗೆ ನಡೆಸಿದ ಯತ್ನವಾಗಿದೆ. 'ನಕಲಿ ಟೂಲ್ಕಿಟ್' ತಯಾರಿಸಲು ಬಿಜೆಪಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದೆ ಎಂದು ಆರೋಪಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾಡಿದ್ದ 'ಕೋವಿಡ್ ಟೂಲ್ಕಿಟ್' ಆರೋಪದ ದೂರಿನ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕ ಸೋಮವಾರ ಟ್ವಿಟರ್ ಇಂಡಿಯಾಗೆ ನೋಟಿಸ್ ನೀಡಿದೆ. ಎರಡು ಪೊಲೀಸ್ ತಂಡಗಳು ನಿನ್ನೆ ಸಂಜೆ ದೆಹಲಿ ಮತ್ತು ಗುರುಗಾಂವ್ನಲ್ಲಿರುವ ಟ್ವಿಟರ್ ಕಚೇರಿಗೆ ತೆರಳಿ ನೋಟಿಸ್ ನೀಡಿ, ಆರೋಪ ಸಂಬಂಧ ಮಾಹಿತಿ ಹಂಚಿಕೊಳ್ಳಲು ಸೂಚಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ, "ದೆಹಲಿ ಪೊಲೀಸರ ಮೂಲಕ ಟ್ವಿಟರ್ ಕಚೇರಿಗಳ ಮೇಲೆ ಹೇಡಿತನದ ದಾಳಿಯು ಬಿಜೆಪಿ ನಾಯಕರ ನಕಲಿ ಟೂಲ್ಕಿಟ್ ಅನ್ನು ಮರೆಮಾಚುವ ಪ್ರಯತ್ನಗಳನ್ನು ಬಹಿರಂಗಪಡಿಸಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಬಿತ್ ಪಾತ್ರ ಕಾಂಗ್ರೆಸ್ ಟೂಲ್ ಕಿಟ್ ಟ್ವೀಟ್ : 'ತಿರುಚಲ್ಪಟ್ಟಿರುವ ಮೀಡಿಯಾ' ಎಂದ ಟ್ವಿಟರ್!
ವಾಕ್ ಸ್ವಾತಂತ್ರ್ಯವನ್ನು 'ಕೊಲೆ' ಮಾಡುವ ಇಂತಹ ಪ್ರಯತ್ನಗಳು ಬಿಜೆಪಿಯ ತಪ್ಪನ್ನು ಹೊರಹಾಕುತ್ತವೆ. ವಾಕ್ ಸ್ವಾತಂತ್ರ್ಯವನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳುವ, ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯದ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನಗಳು, ಪ್ರಚಾರಕ್ಕಾಗಿ ಮತ್ತು ಭಯವನ್ನು ಹುಟ್ಟುಹಾಕಲು ರಾಜ್ಯ ಪ್ರಾಯೋಜಿತ ಮೋಸದ ವಿಧಾನಗಳು ಮೋದಿ ಸರ್ಕಾರದಲ್ಲಿ ಮುಂದುವರಿಯುತ್ತಲೆ ಇರುತ್ತದೆ. 'ನಕಲಿ ಟೂಲ್ಕಿಟ್' ತಯಾರಿಸಲು ಬಿಜೆಪಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದೆ ಎಂದು ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ಸುರ್ಜೆವಾಲಾ ಆರೋಪಿಸಿದ್ದಾರೆ.
ಪ್ರಕರಣ ಹಿನ್ನೆಲೆ
ಕೋವಿಡ್-19 ನಿರ್ವಹಣೆ ಸಂಬಂಧ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಟೂಲ್ಕಿಟ್ ತಯಾರಿಸಿ, ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದರು. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಉಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಜೆಪಿ 'ನಕಲಿ ಟೂಲ್ಕಿಟ್' ತಯಾರಿಸಿದೆ ಎಂದು ಆರೋಪಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಹಿರಿಯ ನಾಯಕರಾದ ಬಿ.ಎಲ್. ಸಂತೋಷ, ಸ್ಮೃತಿ ಇರಾನಿ, ಸಂಬಿತ ಪಾತ್ರಾ ಸೇರಿದಂತೆ ಕೆಲವರ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲಿಸಿದೆ.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಗುದ್ದಾಟ: 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ತೆಗೆಯುವಂತೆ ಟ್ವಿಟ್ಟರ್ಗೆ ಕೇಂದ್ರದ ತಾಕೀತು!
ಅಲ್ಲದೇ ಸಂಬಿತ್ ಪಾತ್ರಾ ಮಾಡಿರುವ ಟ್ವೀಟ್ ಅನ್ನು 'ಮ್ಯಾನಿಪ್ಯುಲೇಟೆಡ್ ಮೀಡಿಯಾ' (ತಿರುಚಲ್ಪಟ್ಟಿರುವ ಮೀಡಿಯಾ) ಎಂದು ಟ್ವಿಟರ್ ಲೇಬಲ್ ಮಾಡಿತ್ತು. ಈ ವಿಷಯವು ಕಾನೂನು ಜಾರಿ ಸಂಸ್ಥೆಯ ಮುಂದೆ ಬಾಕಿ ಇರುವುದರಿಂದ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ಅನ್ನು ತೆಗೆದುಹಾಕುವಂತೆ ಸರ್ಕಾರ ಟ್ವಿಟರ್ಗೆ ಪತ್ರ ಬರೆದಿದೆ. ಈ ವಿಷಯವು ತನಿಖೆಯಲ್ಲಿರುವ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆಯೊಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.