ನವದೆಹಲಿ:ದೇಶದ ನೂತನ ಸಂಸತ್ ಭವನ ಸಿದ್ಧವಾಗಿದೆ. ಇದು ನವ ಭಾರತದ ಸಂಕೇತ ಎಂದು ಬಣ್ಣಿಸಲಾಗುತ್ತಿದೆ. ಇದರೊಂದಿಗೆ ಹೊಸ ಕಟ್ಟಡದಲ್ಲಿ ಕೆಲಸ ಮಾಡುವ ನೌಕರರ ಡ್ರೆಸ್ ಕೂಡ ಬದಲಿಸಲು ನಿರ್ಧರಿಸಲಾಗಿದೆ. ಹೊಸ ಉಡುಗೆಯು ಸಂಪೂರ್ಣವಾಗಿ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿರಲಿದೆ. ಇದೀಗ ನೂತನ ಡ್ರೆಸ್ ಕೋಡ್ ರಾಜಕೀಯ ಗದ್ದಲಕ್ಕೆ ನಾಂದಿ ಹಾಡಿದೆ. "ಆಡಳಿತ ಪಕ್ಷದ ಚುನಾವಣಾ ಚಿಹ್ನೆಯನ್ನು ಪ್ರಚಾರ ಮಾಡಲಾಗುತ್ತಿದೆ, ಇದು ತೀರಾ ಕೆಳಮಟ್ಟದ ರಾಜಕೀಯ ತಂತ್ರಗಾರಿಕೆ" ಎಂದು ಕಾಂಗ್ರೆಸ್ ಟೀಕಿಸಿದೆ.
ಲೋಕಸಭೆಯ ಸಚಿವಾಲಯ ಹೊರಡಿಸಿದ ಆಂತರಿಕ ಸುತ್ತೋಲೆಯ ಪ್ರಕಾರ, ಮಾರ್ಷಲ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು, ಚೇಂಬರ್ ಅಟೆಂಡರ್‌ಗಳು ಮತ್ತು ಚಾಲಕರಿಗೆ ಹೊಸ ಸಮವಸ್ತ್ರವನ್ನು ನೀಡಿದ್ದು, ಹೊಸ ಸಂಸತ್ ಭವನವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಅವರು ಇದನ್ನು ಧರಿಸಬೇಕು ಎಂದು ತಿಳಿಸಿದೆ. ಈ ಉಡುಪನ್ನು NIFT ಸಿದ್ಧಪಡಿಸಿದೆ.
ಉಭಯ ಸದನಗಳ ಮಾರ್ಷಲ್‌ಗಳ ಡ್ರೆಸ್ ಕೂಡ ಬದಲಾಯಿಸಲಾಗಿದೆ. ಈ ಮಾರ್ಷಲ್‌ಗಳು ಮೊದಲಿಗಿಂತ ವಿಭಿನ್ನವಾಗಿ ಕಾಣಲಿದ್ದಾರೆ. ಅವರ ಶರ್ಟ್‌ಗಳು ಕಡು ಗುಲಾಬಿ ಬಣ್ಣದ್ದಾಗಿದ್ದು, ಅವುಗಳ ಮೇಲೆ ಕಮಲದ ಹೂವುಗಳು ಇರುತ್ತವೆ ಮತ್ತು ಖಾಕಿ ಬಣ್ಣದ ಪ್ಯಾಂಟ್, ಮಣಿಪುರಿ ಪೇಟ ಧರಿಸಲಿದ್ದಾರೆ. ಕಮಲದ ಹೂವಿನ ಆಕಾರದ ಬಗ್ಗೆ ಹಲವು ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಅಜೆಂಡಾಗಳ ಅಡಿಯಲ್ಲಿ ಸರ್ಕಾರವು ಉಡುಗೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಜೊತೆಗೆ, ಮಹಿಳಾ ಅಧಿಕಾರಿಗಳಿಗೆ ಚಳಿಗಾಲದಲ್ಲಿ ಧರಿಸಲು ಜಾಕೆಟ್‌ಗಳೊಂದಿಗೆ ಗಾಢ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನೀಲಿ ಸಫಾರಿ ಸೂಟ್‌ಗಳ ಬದಲಿಗೆ ಸೈನ್ಯನಿಕರು ಧರಿಸುವ ರೀತಿಯ ಬಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.