ನವದೆಹಲಿ: ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಭಯೋತ್ಪಾದನೆಯನ್ನು ರಕ್ಷಿಸುತ್ತದೆ ಎಂಬ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಶುಕ್ರವಾರ ಬಳ್ಳಾರಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮೋದಿ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಚುನಾವಣೆಯ ವಾತಾವರಣ ಹಾಳು ಮಾಡಲು ದುರುದ್ದೇಶಪೂರಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮೋದಿ ಅವರು ಲಕ್ಷ್ಮಣ ರೇಖೆ ದಾಟಿದ್ದಾರೆ ಎಂದು ಆರೋಪಿಸಿದೆ.
ಕರ್ನಾಟಕದಲ್ಲಿದ್ದ ಒಳ್ಳೆಯ ವಾತಾವರಣವನ್ನು ಧ್ರುವೀಕರಣಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂರಿದೆ. ಕಾಂಗ್ರೆಸ್ ಭಯೋತ್ಪಾದನೆಯ ಮುಂದೆ ಕಾಂಗ್ರೆಸ್ ಸಂಪೂರ್ಣ ಶರಣಾಗಿದೆ. ಅದನ್ನು ಸಂರಕ್ಷಿಸಿ, ಆಶ್ರಯ ನೀಡುತ್ತಿದೆ ಎಂದು ಮೋದಿ ಟೀಕಾಸಮರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಚು.ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಕೇವಲ ಲಕ್ಷ್ಮಣ ರೇಖೆಯನ್ನಷ್ಟೇ ಅವರು ದಾಟಿಲ್ಲ. ಹಿಂದಿನ ಸಂಪ್ರದಾಯಗಳನ್ನೂ ಮುರಿದಿದ್ದಾರೆ. ಚುನಾವಣಾ ಆಯೋಗವು ಇದನ್ನು ಪರಿಶೀಲಿಸದೆ, ಉತ್ತರಿಸದೆ ಮತ್ತು ಶಿಕ್ಷಿಸದೆ ಇರಲು ಸಾಧ್ಯವಿಲ್ಲ ಎಂದು ಮನವಿ ಮಾಡಲಾಗಿದೆ.