ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಕೊರತೆಗೆ ಸರ್ಕಾರವೇ ಕಾರಣ ಎಂದು ನಿನ್ನೆ ಕಾಂಗ್ರೆಸ್ ಆರೋಪಿಸಿತ್ತು. ಇದೇ ವೇಳೆ, ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ವಿದ್ಯುತ್ ದರವನ್ನೂ ಸಹ ಹೆಚ್ಚಿಸಬಹುದು ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕಲ್ಲಿದ್ದಲು ಕೊರತೆ ಬಗ್ಗೆ ಟ್ವೀಟ್ ಮಾಡಿ, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಇದರಿಂದಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ದೇಶದಲ್ಲಿ ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ಬೇಡಿಕೆಯನ್ನು ಪೂರೈಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
'ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಒಂದು ನಿರ್ದಿಷ್ಟ ಖಾಸಗಿ ಕಂಪನಿ ಇಂತಹ ಬಿಕ್ಕಟ್ಟಿನಿಂದ ಲಾಭ ಗಳಿಸುತ್ತಿದೆಯೇ?, ಯಾರು ಈ ಕುರಿತು ತನಿಖೆ ನಡೆಸುತ್ತಾರೆ' ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸ್ನೇಹಿತರ ಲಾಭಕ್ಕಾಗಿ ನರೇಂದ್ರ ಮೋದಿ ಮಾಡಿದ ವಿದ್ಯುತ್ ಬಿಕ್ಕಟ್ಟು ಎಂದು ಆರೋಪಿಸಿದ್ದಾರೆ.
"ಆತ್ಮೀಯ ದೇಶವಾಸಿಗಳೇ ಸಿದ್ಧರಾಗಿರಿ, ಸಾಹೇಬ್ (ಮೋದಿ) ಮತ್ತು ಅವರ ಸ್ನೇಹಿತರು ಈಗ ಪ್ರತಿ ಯೂನಿಟ್ ವಿದ್ಯುತ್ಗೆ ತಮ್ಮದೇ ದರವನ್ನು ವಿಧಿಸಬಹುದು ಮತ್ತು ಅದನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡಬಹುದು" ಎಂದು ಸುರ್ಜೇವಾಲಾ ಹೇಳಿದ್ದಾರೆ.