ರಾಯಪುರ, ಛತ್ತೀಸ್ಗಢ:ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸರ್ವ ಸದಸ್ಯರ ಸಮಾವೇಶ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಇಂದಿನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದಾರೆ. ಪಕ್ಷದ 85 ನೇ ಅಧಿವೇಶನಕ್ಕೆ ಖರ್ಗೆ ಚಾಲನೆ ನೀಡಿದ್ದು, ಫೆ.26 ರಂದು ಸಂಜೆ ಸಾರ್ವಜನಿಕ ಸಭೆಯೊಂದಿಗೆ ಈ ಅಧಿವೇಶನ ಮುಕ್ತಾಯಗೊಳ್ಳಲಿದೆ.
ಎರಡನೇ ದಿನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ಸರ್ವ ಸದಸ್ಯರ ಸಮಾವೇಶದ ವೇಳಾಪಟ್ಟಿ ಈ ರೀತಿ ಇದೆ. ಎಲ್ಲ ಪಿಸಿಸಿ ಪ್ರತಿನಿಧಿಗಳು ಮತ್ತು ಎಐಸಿಸಿ ಪ್ರತಿನಿಧಿಗಳು ಶನಿವಾರ ಬೆಳಗ್ಗೆ 9:00 ಗಂಟೆಗೆ ಸಮಾವೇಶಗೊಂಡಿದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 9:50 ಕ್ಕೆ ಧ್ವಜಾರೋಹಣ ನೆರವೇರಿಸಿದರು. ಇದಾದ ಬಳಿಕ ಖರ್ಗೆ 10:30 ಕ್ಕೆ ಸಮಾವೇಶದಲ್ಲಿ ಪ್ರಸ್ತಾವನೆ ಸಲ್ಲಿಕೆ ಕೂಡಾ ಮಾಡಿದ್ದಾರೆ. ಸಂವಿಧಾನದಲ್ಲಿ ಮಾಡಬೇಕಾದ ತಿದ್ದುಪಡಿ ಕುರಿತು ಅಧ್ಯಕ್ಷರು ಪ್ರಸ್ತಾಪಿಸಿದ್ದಾರೆ. 11:30 ಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಷಣ ಮಾಡಲಿದ್ದಾರೆ.
12 ಗಂಟೆಗೆ ರಾಜಕೀಯ ಪ್ರಸ್ತಾವನೆ, ಆರ್ಥಿಕ ಪ್ರಸ್ತಾವನೆ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಸ್ತಾವನೆ ಈ ಮೂರನ್ನೂ ಒಗ್ಗೂಡಿಸಿ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿ ತಿದ್ದುಪಡಿ ತರಲಾಗುವುದು ಎಂದು ಜೈರಾಂ ರಮೇಶ್ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸಮಾವೇಶದ ಕೊನೆಯ ದಿನದ ಕಾರ್ಯಕ್ರಮದ ಬಗ್ಗೆಯೂ ಜೈರಾಮ್ ರಮೇಶ್ ಮಾಹಿತಿ ನೀಡಿದರು. ಫೆಬ್ರವರಿ 26ರ ಭಾನುವಾರ ಬೆಳಗ್ಗೆ 9:30ಕ್ಕೆ ಎಲ್ಲರೂ ಸೇರಲಿದ್ದು, ಉಳಿದ ಮೂರು ಪ್ರಸ್ತಾವನೆಗಳನ್ನು ಕೃಷಿ ರೈತ ಕಲ್ಯಾಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಯುವಜನರ ಶಿಕ್ಷಣ ಮತ್ತು ಉದ್ಯೋಗ ಕುರಿತು ಚರ್ಚಿಸಲಾಗುವುದು. ಇದಾದ ಬಳಿಕ 10 ಗಂಟೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.