ನವದೆಹಲಿ:ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭುಯಾನ್ ಅವರು ಕೇಂದ್ರ ಸರ್ಕಾರದ ಯೋಜನೆಯಡಿ 10 ಕೋಟಿ ರೂಪಾಯಿ ಸಬ್ಸಿಡಿ ಪಡೆದಿದ್ದಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್, ಇದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದೆ.
ಕಾಂಗ್ರೆಸ್ ಯುವ ನಾಯಕ ಗೌರವ್ ಗೊಗೊಯ್ ಅವರು ಅಸ್ಸೋಂ ಸಿಎಂ ಪತ್ನಿ ವಿರುದ್ಧ 10 ಕೋಟಿ ರೂಪಾಯಿ ಸಬ್ಸಿಡಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆಗೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬಹಿರಂಗವಾಗಿ ಕಿತ್ತಾಡಿದ್ದ ಅವರು, ಇದೀಗ ಪ್ರಕರಣದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಸೋಮವಾರ ಮನವಿ ಮಾಡಿದರು.
ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಗೊಗೊಯ್, ಅಸ್ಸೋಂ ಸಿಎಂ ಪತ್ನಿ ಮುನ್ನಡೆಸುತ್ತಿರುವ ಸಂಸ್ಥೆಗೆ ಕೇಂದ್ರ ಸರ್ಕಾರದ ಯೋಜನೆಯಡಿ 10 ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗಿದೆ. ಆಹಾರ ಸಂಸ್ಕರಣೆ ಉದ್ಯಮ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ಪ್ರೈಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿದೆ. ಇದು ಹಿಮಂತ್ ಶರ್ಮಾ ಅವರ ಪತ್ನಿಯದ್ದಾಗಿದೆ. ಈ ಬಗ್ಗೆ ನೀವು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಈ ಅಂಶ ಅಡಕವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸರ್ಕಾರದಿಂದ ಪಡೆದಿರುವ ಸಬ್ಸಿಡಿಯನ್ನು ಸಂಸ್ಥೆಯ ಮಾಲೀಕರು ನಿರಾಕರಿಸಿದ್ದಾರೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿಗಾಗಿ ನೀವು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಆಗ ಈ ವಿಷಯದಲ್ಲಿ ನಿಜವಾದ ಸತ್ಯಗಳು ಬಹಿರಂಗವಾಗಲಿವೆ ಎಂದು ಗೊಗೊಯ್ ತಮ್ಮ ಪತ್ರದಲ್ಲಿ ಕೋರಿದ್ದಾರೆ. ಅದರ ಪ್ರತಿಯು ETV ಭಾರತ್‌ಗೆ ಲಭ್ಯವಾಗಿದೆ.