ನವದೆಹಲಿ: ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹರಿಯಾಣ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಹಿಸ್ಸಾರ್ ಜಿಲ್ಲೆಯ ಅದಮ್‌ಪುರ್ ಕ್ಷೇತ್ರದ ಶಾಸಕರಾಗಿರುವ ಕುಲದೀಪ್, ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಅಜಯ್ ಮಕೇನ್ ಬದಲಿಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದರು. ಅಲ್ಲದೇ, ಮತ್ತೊಬ್ಬ ಕಾಂಗ್ರೆಸ್ ಶಾಸಕ ಕೂಡ ಅಡ್ಡ ಮತದಾನ ಮಾಡಿದ್ದರು. ಪರಿಣಾಮ ಅಜಯ್ ಮಕೇನ್ 31 ಮತ ಪೈಕಿ 29 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಆದ್ದರಿಂದ ಇದೀಗ ಶಾಸಕ ಕುಲದೀಪ್ ಬಿಷ್ಣೋಯ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಹುದ್ದೆ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಬಿಜೆಪಿ ಶಾಸಕಿ ಅಮಾನತು: ರಾಜಸ್ಥಾನದಲ್ಲಿ ಧೋಲ್ಪುರ್ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹಾ ಕೂಡ ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ಗೆ ಮತ ಹಾಕಿದ್ದಾರೆ ಎನ್ನಲಾಗುತ್ತದೆ. ಆದ್ದರಿಂದ ಶಾಸಕಿ ಶೋಭಾರಾಣಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕದಿಂದಲೂ ವಿವರಣೆ ಕೇಳಿದೆ.
ಇತ್ತ, ಬೆಳವಣಿಗೆಗಳ ಬಳಿಕ ಶಾಸಕಿ ಶೋಭಾರಾಣಿ ಬಿಜೆಪಿ ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಪಕ್ಷದ ನಾಯಕರ ನಡೆಯನ್ನೇ ಪ್ರಶ್ನಿಸಿ 5 ಅಂಶಗಳ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ನನ್ನನ್ನು ಅಮಾನತುಗೊಳಿಸುವಲ್ಲಿ ಆತುರತೆ ತೋರಲಾಗಿದೆ. ಪಕ್ಷದ ಸೋಲಿಗೆ ಕಾರಣವಾಗುವ ನಾಯಕರ ಮೇಲೂ ಇದೇ ರೀತಿ ಕ್ರಮ ವಹಿಸಿದ್ದರೆ ಪಕ್ಷಕ್ಕೆ ನಷ್ಟವಾಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ಗಲಭೆ ಸೃಷ್ಟಿಸಿದ 227 ಜನರ ಬಂಧನ.. ಕಠಿಣ ಕ್ರಮಕ್ಕೆ ಸಿಎಂ ಯೋಗಿ ಸೂಚನೆ