ನವದೆಹಲಿ: ಪಕ್ಷದ ನಾಯಕರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಬೆನ್ನಲ್ಲೆ, ಮಾಧ್ಯಮ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಐವರು ಹಿರಿಯ ನಾಯಕರ ಖಾತೆಗಳನ್ನು ಇದೇ ರೀತಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕೆನ್, ಲೋಕಸಭೆಯಲ್ಲಿ ಪಕ್ಷದ ಸಚೇತಕ ಮಾಣಿಕ್ಕಂ ಟಾಗೋರ್, ಪಕ್ಷದ ಅಸ್ಸೋಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆಗಳನ್ನು ಅಮಾನತು ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಕ್ಷದ ಮಾಧ್ಯಮ ವಿಭಾಗದ ಉಸ್ತುವಾರಿ ಮತ್ತು ಎಐಸಿಸಿ ಕಾರ್ಯದರ್ಶಿ ಪ್ರಣವ್, ಎಲ್ಲರಿಗೂ ಅನ್ಯಾಯವಾಗಿದೆ ಈ ಬಗ್ಗೆ ಪಕ್ಷ ಪ್ರತಿಭಟನೆಯನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ನಾವು ಕಾಲಾಪಾನಿಯಿಂದಲೂ ಹೋರಾಟದ ಇತಿಹಾಸ ಹೊಂದಿದ್ದೇವೆ ಎಂಬುವುದು ಮೋದಿಜಿಗೆ ಅರ್ಥವಾಗುತ್ತಿಲ್ಲ. ಟ್ವಿಟ್ಟರ್ ಲಾಕ್ ಮಾಡಿದರೆ ನಾವು ಹೋರಾಟ ಮಾಡದಂತೆ ತಡೆಯಬಹುದು ಎಂದು ಭಾವಿಸಿದ್ದಾರೆ ಎಂದು ಮೊತ್ತೊಂದು ಟ್ವೀಟ್ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಬಂಧಪಟ್ಟಂತೆ ಟ್ವೀಟ್ ಮಾಡುವಾಗ ಸಂತ್ರಸ್ತೆಯ ಕುಟುಂಬಸ್ಥರ ಫೋಟೋವನ್ನು ಪೋಸ್ಟ್ ಮಾಡಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರ ಖಾತೆಯ ಟ್ವಿಟ್ಟರ್ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟ್ಟರ್ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ವಿಟರ್ ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಭಾರತದಾದ್ಯಂತ ನಮ್ಮ ನಾಯಕರು ಮತ್ತು ಕಾರ್ಯಕರ್ತರ 5,000 ಖಾತೆಗಳನ್ನು ನಿರ್ಬಂಧಿಸಿದೆ. ಟ್ವಿಟರ್ ಅಥವಾ ಸರ್ಕಾರಕ್ಕೆ ನಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು ಎಂದು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಹೇಳಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರ ಫೋಟೋ ಪ್ರದರ್ಶನ ಮಾಡದಂತೆ ನ್ಯಾಯಾಲಯ ನೀಡಿರುವ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಟ್ವಿಟ್ಟರ್ಗೆ ಸೂಚಿಸಿತ್ತು ಅಲ್ಲದೆ, ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹಲವರು ದೂರು ಕೂಡ ನೀಡಿದ್ದಾರೆ.