ದಹಿಸರ್(ಮಹಾರಾಷ್ಟ್ರ):ಮಹಿಳಾ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿ ವೇಳೆ ಗೊಂದಲ ಸೃಷ್ಟಿಯಾಗಿದೆ. ಮುಂಬೈನ ದಹಿಸರ್ ವೆಸ್ಟ್‌ನಲ್ಲಿರುವ ಗೋಪಿನಾಥ್ ಮುಂಡೆ ಮೈದಾನದಲ್ಲಿ ಮಹಿಳಾ ಅಗ್ನಿಶಾಮಕ ದಳದ ಅಧಿಕಾರಿಗಳ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ದೇಹದ ಎತ್ತರದ ಕಾರಣವನ್ನೇ ಪ್ರಮುಖವಾಗಿರಿಸಿಕೊಂಡು ಮಹಿಳಾ ಅಭ್ಯರ್ಥಿಗಳನ್ನು ಹೊರಹಾಕಲಾಗಿದೆ ಎಂದು ಯುವತಿಯರು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ರಾತ್ರಿಯಿಂದಲೇ ಈ ಸ್ಥಳಕ್ಕೆ ಬಂದಿದ್ದ ಸಾವಿರಾರು ಮಹಿಳೆಯರು ನೇಮಕಾತಿಗೆ ಸಿದ್ಧತೆ ಕೂಡಾ ನಡೆಸಿದ್ದರು.
ಬೆಳಗ್ಗೆ ಮಹಿಳಾ ಅಭ್ಯರ್ಥಿಗಳಿಗೆ ಇಲ್ಲಿನ ಗೇಟ್ ಮೂಲಕ ಪ್ರವೇಶವೇ ನೀಡಿರಲಿಲ್ಲ. ನಂತರ ಮಹಿಳಾ ಅಭ್ಯರ್ಥಿಗಳು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್, ಅಗ್ನಿಶಾಮಕ ಇಲಾಖೆ ನೇಮಕಾತಿ ಮಂಡಳಿ (ಬಿಎಂಸಿ) ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು ಹಾಗೂ ಮಹಿಳಾ ಅಭ್ಯರ್ಥಿಗಳ ನಡುವೆ ವಾಗ್ವಾದ ನಡೆಯಿತು. ''ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ರದ್ದುಗೊಳಿಸಬೇಕು'' ಎಂದು ಯುವತಿಯರು ಪಟ್ಟು ಹಿಡಿದರು.
ಹೆಚ್ಚಿನ ಅಂಕ ಗಳಿಸಿದ ಮಹಿಳಾ ಅಭ್ಯರ್ಥಿಗಳಿಗೂ ಪ್ರವೇಶ ನೀಡುತ್ತಿಲ್ಲ:''ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ಅಧಿಕಾರಿಗಳು ಉತ್ತಮ ಎತ್ತರ ಹೊಂದಿರುವ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿಲ್ಲ. ಹೆಚ್ಚಿನ ಅಂಕಗಳನ್ನು ಗಳಿಸಿರುವ ಯುವತಿಯರಿಗೂ ಪ್ರವೇಶ ನೀಡುತ್ತಿಲ್ಲ. ನೇಮಕಾತಿ ಅರ್ಹತೆಯ ಮಾನದಂಡಗಳನ್ನು ಪೂರೈಸಿದ್ದರೂ ಮುಂಬೈ ಅಗ್ನಿಶಾಮಕ ದಳದ ನೇಮಕಾತಿಗೆ ಅವಕಾಶ ನೀಡುತ್ತಿಲ್ಲ ಎಂದು ಯುವತಿಯರು ಗಂಭೀರ ಆರೋಪ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದರು.