ತಿರುವನಂತಪುರಂ (ಕೇರಳ): ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಸಂಬಂಧಿಸಿದಂತೆ ಕೇರಳ ಡಿಜಿಪಿ ಹಾಗೂ ಕೇರಳ ಮೋಟಾರು ವಾಹನ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಸಂಚಾರ ನಿಯಮಗಳ ಉಲ್ಲಂಘನೆ ಆರೋಪದಡಿ ಪ್ರಧಾನಿ ವಿರುದ್ಧ ದೂರು ಕೊಡಲಾಗಿದೆ.
ಏಪ್ರಿಲ್ 24 ಮತ್ತು 25ರಂದು ಎರಡು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದರು. ಈ ಬಗ್ಗೆ ಏಪ್ರಿಲ್ 26ರಂದು ತ್ರಿಶೂರ್ ಮೂಲದ ಜಯಕೃಷ್ಣನ್ ಎಂಬುವರು ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್‌ಕಾಂತ್ ಹಾಗೂ ಮೋಟಾರು ವಾಹನ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?: ಕೊಚ್ಚಿಯಲ್ಲಿ ಪ್ರಧಾನಿ ಮೋದಿ ಅವರು ರೋಡ್ ಶೋ ವೇಳೆ ವಾಹನದ ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸಿದ್ದಾರೆ. ರಸ್ತೆ ಕಾಣದಂತೆ ಗಾಜಿಗಳಿಗೆ ಹೂವುಗಳನ್ನು ಎಸೆಯುವುದು ಕೂಡ ಸಂಚಾರಿ ನಿಯಮ ಉಲ್ಲಂಘನೆಯನ್ನು ಎತ್ತಿ ತೋರಿಸುತ್ತಿದೆ. ಕಾನೂನು ಪಾಲಿಸಲು ಎಲ್ಲರೂ ಬದ್ಧರಾಗಿ ಅದನ್ನು ಪಾಲಿಸಬೇಕು ಎಂದು ಜಯಕೃಷ್ಣನ್ ದೂರಿನಲ್ಲಿ ತಿಳಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಏಪ್ರಿಲ್ 24 ರಂದು ಕೊಚ್ಚಿಗೆ ಆಗಮಿಸಿದ್ದರು. ತಿರುವನಂತಪುರಂ - ಕಾಸರಗೋಡು ನಡುವಿನ ವಂದೇ ಭಾರತ್ ರೈಲು ಮತ್ತು ವಾಟರ್ ಮೆಟ್ರೋ ಸೇವೆಯ ಉದ್ಘಾಟನೆ ಮತ್ತು ಡಿಜಿಟಲ್ ಸೈನ್ಸ್ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಯುವಜನರೊಂದಿಗೆ ‘ಯುವಂ’ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದರು.
ಇದನ್ನೂ ಓದಿ:ತಿರುವನಂತಪುರಂ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಇದಕ್ಕೂ ಮುನ್ನ ಕೊಚ್ಚಿಯಲ್ಲಿ ಮೋದಿ ರೋಡ್ ಶೋ ನಡೆಸಿದ್ದರು. ಈ ವೇಳೆ, ತಮ್ಮ ಅಧಿಕೃತ ಕಾರಿನ ಮುಂಭಾಗದ ಸೀಟಿನ ಫುಟ್ಬೋರ್ಡ್ ಮೇಲೆ ನಿಂತು ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದ್ದರು. 1.8 ಕಿ.ಮೀ. ದೂರದಷ್ಟು ಸುದೀರ್ಘ ರೋಡ್ ಶೋನಲ್ಲಿ ಮೋದಿ ಪಾಲ್ಗೊಂಡಿದ್ದರು. ರೋಡ್ ಶೋ ಉದ್ದಕ್ಕೂ ಜನರು ಹಳದಿ ಹೂಗಳನ್ನು ಎಸೆದು ಘೋಷಣೆಗಳನ್ನು ಕೂಗುತ್ತಾ ಅವರನ್ನು ಸ್ವಾಗತಿಸಿದ್ದರು. ಮರು ದಿನ ಎಂದರೆ ಏ.25ರಂದು ತಿರುವನಂತಪುರಕ್ಕೆ ಬಂದಿಳಿದ ನಂತರ ಸಹ ಮೋದಿ ಇಂತಹದ್ದೇ ರೋಡ್ ಶೋ ನಡೆಸಿದ್ದರು. ತಿರುವನಂತಪುರ ವಿಮಾನ ನಿಲ್ದಾಣದಿಂದ ಸೆಂಟರ್ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ಮಾಡಿದ್ದರು.
ಅಮಿತ್ ಶಾ ವಿರುದ್ಧ ಕಾಂಗ್ರೆಸ್ ದೂರು: ಕರ್ನಾಟಕ ವಿಧಾನಸಭಾ ಚುನಾವಣಾ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ನೀಡಿದೆ. ಕರ್ನಾಟಕದಲ್ಲಿಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ಆಗುತ್ತದೆ ಎಂದು ರಾಜ್ಯದ ಮತದಾರರಿಗೆ ಅಮಿತ್ ಶಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸರಿಗೆ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದಾರೆ. ಅಮಿತ್ ಶಾ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Karnataka Election: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರಿಂದ ಪೊಲೀಸರಿಗೆ ದೂರು