ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಲಾದ ಔಷಧ ಕಾರಣವಾಗಿರಬಹುದು ಎಂದು ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ದಿವಂಗತ ಸುಶಾಂತ್ ಸಹೋದರಿಯರಾದ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ನಗರ ಪೊಲೀಸರು ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ನಟಿ ರಿಯಾ ಚಕ್ರವರ್ತಿ ಕೂಡ ರಜಪೂತ್ ಸಹೋದರಿಯರ ವಿರುದ್ದ ದೂರು ನೀಡಿದ್ದರಿಂದ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ.
ರಜಪೂತ್ ಗೆಳತಿ ನಟಿ ರಿಯಾ ಚಕ್ರವರ್ತಿ ದೂರಿನ ಮೇರೆಗೆ ಸೆಪ್ಟೆಂಬರ್‌ನಲ್ಲಿ ಬಾಂದ್ರಾ ಪೊಲೀಸರು ಅವರ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ರಜಪೂತ್ ಸಹೋದರಿಯರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಪೊಲೀಸರು ಸಿಬಿಐ ನಡೆಸುತ್ತಿರುವ ತನಿಖೆಯನ್ನು ಪ್ರಭಾವಿಸಲು ಅಥವಾ ಪ್ರಕರಣ ತನಿಖೆಯ ಹಳಿ ತಪ್ಪಿಸಲು ಪ್ರಯತ್ನಿಸುತ್ತಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ರಿಯಾ ಚಕ್ರವರ್ತಿ ದೂರಿನ ಪ್ರಕಾರ , ದೆಹಲಿ ಮೂಲದ ವೈದ್ಯರ ಸಹಾಯದಿಂದ ಅರ್ಜಿದಾರರು ನಕಲಿ ಮತ್ತು ಕಲ್ಪಿತ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಕಳುಹಿಸಿದ್ದಾರೆ. ಅದರಲ್ಲಿ ರಜಪೂತ್ ಗೆ ಸೂಚಿಸಲಾದ ಔಷಧಿಗಳಿಗೆ ಸರಿಯಾದ ವೈದ್ಯಕೀಯ ಸಲಹೆಗಳಿರಲಿಲ್ಲ. ಇದು ಸುಶಾಂತ್ ವೈದ್ಯರಿಂದ ಪರೀಕ್ಷಿಸಿಕೊಳ್ಳದೆ ತೆಗೆದುಕೊಳ್ಳುತ್ತಿದ್ದ ಔಷಧಿಯಾಗಿದ್ದು ಇದು ಅವರ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
"ಮಾಹಿತಿದಾರರ ಈ ನಿಲುವು ಅಪರಾಧವನ್ನು ಬಹಿರಂಗಪಡಿಸಿದ್ದು ಯಾವುದೇ ಪ್ರಾಥಮಿಕ ವಿಚಾರಣೆಯ ಅಗತ್ಯವಿಲ್ಲ. ಆದ್ದರಿಂದ, ಮುಂಬೈ ಪೊಲೀಸರು ಎಫ್ಐಆರ್ ಅನ್ನು ನೋಂದಾಯಿಸಲು ಕರ್ತವ್ಯನಿರತರಾಗಿದ್ದಾರೆ" ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.
ಎಫ್‌ಐಆರ್ ನೋಂದಣಿ ಮಾಡಿದ ನಂತರ, ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ಆದೇಶವನ್ನು ಅನುಸರಿಸಿ ಪೊಲೀಸರು ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆಂದು ಹೇಳಲಾಗಿದೆ.
ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣವು ಬಿಹಾರದಲ್ಲಿ ಮೃತ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ದಾಖಲಿಸಿದ್ಧ ಕೇಸ್ ಆಗಿದೆ. ಇನ್ನೊಂದೆಡೆ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್, ರಿಯಾ ಚಕ್ರವರ್ತಿಯವರು ಮೃತ ಸುಶಾಂತ್ ಸಹೋದರಿಯರಾದ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್ ಮತ್ತು ವೈದ್ಯ ತರುಣ್ ಕುಮಾರ್ ವಿರುದ್ಧ ನೀಡಿದ ದೂರಾಗಿದೆ.