ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಆದರೆ ತಮ್ಮ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಯೋಗೇಶ್ ರಾವಣಿ ಅವರು ಪ್ರಧಾನಿ ಮೋದಿ ವಿರುದ್ಧ ಅಹಮದಾಬಾದ್‌ನಲ್ಲಿ ದೂರು ದಾಖಲಿಸಿದ್ದಾರೆ.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪ್ರಧಾನಿ ವಿರುದ್ಧ ಮುಗಿಬಿದ್ದಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮತದಾನದ ಬಳಿಕ ಮೋದಿ ರೋಡ್ ಶೋ: ಪ್ರಧಾನಿ ಮೋದಿಯವರು ಇಲ್ಲಿನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಸುಮಾರು 50 ಕಿಮೀ 'ಪುಷ್ಪಾಂಜಲಿ ಯಾತ್ರೆ' ನಡೆಸಿದ್ದರು. ಈ ರೋಡ್ ಶೋ ನಗರದ 35 ಪ್ರದೇಶಗಳಲ್ಲಿ, ಅಹಮದಾಬಾದ್‌ನ 13 ಕ್ಷೇತ್ರ ಹಾಗೂ ಗಾಂಧಿನಗರ ಜಿಲ್ಲೆಯ ಒಂದು ಕ್ಷೇತ್ರಗಳಲ್ಲಿ ಸಾಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ರೋಡ್ ಶೋ ನಡೆಸಲಾಗಿದ್ದು, ಎಲ್ಲಾ ಚಾನೆಲ್‌ಗಳು ಪ್ರಸಾರ ಮಾಡಿವೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಕಿಡಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಪ್ರಧಾನಿಯಾಗಲಿ ಅಥವಾ ಬೇರೆ ಯಾರೇ ಆಗಿರಲಿ, ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣಬೇಕು. ಯಾವುದೇ ಒತ್ತಡ ಅಥವಾ ಭಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಇದರಲ್ಲಿ ಹೊಸದೇನೂ ಇಲ್ಲ, 2017ರಲ್ಲಿಯೂ ಇವರು ಇಂತೆಯೇ ಮಾಡಿದ್ದರು. ಇದಕ್ಕೆ ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿದ್ದವು. ಇದು ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿ ನಡುವೆ ಇರುವ ವ್ಯತ್ಯಾಸವಾಗಿದೆ. ನಮ್ಮ ಕಾಲದಲ್ಲಿ ಜನರ ಇಚ್ಛೆಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು ಎಂದು ಟೀಕಿಸಿದ್ದಾರೆ.
ಮೋದಿ ಮತ್ತು ಬಿಜೆಪಿ ವಿಶೇಷ ವ್ಯಕ್ತಿಗಳು:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಮತದಾನದ ದಿನದಂದು ರೋಡ್‌ಶೋಗೆ ಅನುಮತಿ ಇಲ್ಲ, ಆದರೆ ಪ್ರಧಾನಿ ಮೋದಿ ಮತ್ತು ಅವರ ಪಕ್ಷವು ವಿವಿಐಪಿಗಳು, ಅವರು ಏನು ಬೇಕಾದರೂ ಮಾಡಬಹುದು.ಅದನ್ನು ಕ್ಷಮಿಸಲಾಗುವುದು. ಆದರೆ ಇತರ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಬೇಕು. ಚುನಾವಣಾ ದಿನದಂದು, ರೋಡ್‌ಶೋಗಳನ್ನು ನಿಷೇಧಿಸಲಾಗಿದೆ ಆದರೆ ಅವರು (ಮೋದಿ ಮತ್ತು ಬಿಜೆಪಿ) ವಿಶೇಷ ವ್ಯಕ್ತಿಗಳು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಗುಜರಾತ್, ಹಿಮಾಚಲದಲ್ಲಿ ಮತ್ತೆ ಬಿಜೆಪಿ: ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ