ಮುಂಬೈ(ಮಹಾರಾಷ್ಟ್ರ):ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ವೇಳೆ 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ನಾನು ಭೋಪಾಲ್‌ಗೆ ಸೇರಿದವನು. ಭೋಪಾಲಿ ಅಲ್ಲ, ಭೋಪಾಲಿ ಪದದ ಅರ್ಥ ಸಲಿಂಗಿ ಎಂದು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾದಿತ ಹೇಳಿಕೆ ನೀಡಿರುವುದಕ್ಕಾಗಿ ವರ್ಸೋಲಾ ಪೊಲೀಸ್ ಠಾಣೆಯಲ್ಲಿ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ. ಭೋಪಾಲ್ ಮೂಲದ ಪತ್ರಕರ್ತ ಮತ್ತು ಸೆಲೆಬ್ರೆಟಿ ಮ್ಯಾನೇಜರ್ ಆಗಿರುವ ರೋಹಿತ್ ಪಾಂಡೆ ಈ ದೂರು ದಾಖಲು ಮಾಡಿದ್ದಾಗಿ ತಿಳಿದು ಬಂದಿದೆ. ಭೋಪಾಲ್‌ನಲ್ಲಿ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.