ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನದಿಂದ ಬೋರಿಸ್ ಜಾನ್ಸನ್ ಅವರನ್ನು ಸರಿಸಿ ಆ ಸ್ಥಾನ ಆಕ್ರಮಿಸುವುದು ಹಾಗೂ ಮುಂದಿನ ಬ್ರಿಟಿಷ್ ಪ್ರಧಾನ ಮಂತ್ರಿಯಾಗುವ ರಾಜಕೀಯ ಹಗ್ಗ-ಜಗ್ಗಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಬ್ರಿಟನ್ ಪ್ರಧಾನಿ ಹುದ್ದೆಗೆ ಮಾಜಿ ಸಚಿವ ಹಾಗೂ ಬ್ರಿಟಿಷ್-ಭಾರತೀಯ ರಿಷಿ ಸುನಕ್ ಈಗಾಗಲೇ ರೇಸ್ನಲ್ಲಿದ್ದು, ಈಗ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಸಹ ಅತ್ಯುನ್ನತ ಹುದ್ದೆಯ ಸ್ಪರ್ಧೆಗಿಳಿದಿದ್ದು, ಬ್ರಿಟನ್ ರಾಜಕೀಯ ಮತ್ತಷ್ಟು ರೋಚಕವಾಗುತ್ತಿದೆ.
ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ ಸಚಿವಾಲಯದಲ್ಲಿ ಟ್ರಸ್ ಅವರ ಜ್ಯೂನಿಯರ್ ಆಗಿದ್ದ, ಮುಜಪ್ಫರಾಬಾದ್ನಲ್ಲಿ ಜನಿಸಿರುವ ಪಾಕಿಸ್ತಾನ ಮೂಲದ ರೆಹ್ಮಾನ್ ಚಿಸ್ತಿ ಕೂಡ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಯುಕೆ ಯಲ್ಲಿ ಹುಟ್ಟಿದ ಆದರೆ, ಪಾಕಿಸ್ತಾನ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವೇದ್ ಸಹ ಸ್ಪರ್ಧೆಯಲ್ಲಿದ್ದಾರೆ.