ಕರ್ನಾಟಕ

karnataka

ETV Bharat / bharat

ಅಪಘಾತದಲ್ಲಿ ಮೃತಪಟ್ಟ ಬಡಪಾಯಿ ವ್ಯಕ್ತಿಯ ಕುಟುಂಬಕ್ಕೆ ₹10 ಲಕ್ಷದ ಮನೆ ಕಟ್ಟಿಸಿ, ಗೃಹಪ್ರವೇಶವನ್ನೂ ಮಾಡಿಸಿಕೊಟ್ಟ ಪೊಲೀಸರು! - ಕಡಲೂರು

ತಮಿಳುನಾಡಿನ ಕಡಲೂರಿನಲ್ಲಿ ಪೊಲೀಸರೇ ಒಗ್ಗೂಡಿ ರಸ್ತೆ ಅಪಘಾತದಲ್ಲಿ ಮನೆ ಯಜಮಾನನ್ನು ಕಳೆದುಕೊಂಡ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿದ್ದಲ್ಲದೇ, ತಮ್ಮ ಖರ್ಚಲ್ಲೇ ಗೃಹ ಪ್ರವೇಶವನ್ನೂ ಮಾಡಿಸಿಕೊಟ್ಟಿದ್ದಾರೆ.

10 ಲಕ್ಷ ಮೌಲ್ಯದ ಮನೆ
10 ಲಕ್ಷ ಮೌಲ್ಯದ ಮನೆ

By ETV Bharat Karnataka Team

Published : Oct 27, 2023, 10:58 PM IST

ಪೊಲೀಸರ ಮಾನವೀಯತೆ

ಕಡಲೂರು (ತಮಿಳುನಾಡು):ರಸ್ತೆ ಅಪಘಾತದಲ್ಲಿ ಮೃತಪಟ್ಟ ಮನೆ ಯಜಮಾನನ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಟ್ಟು ಇಲ್ಲಿನ ವೃದ್ಧಾಚಲಂ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಶಕ್ತಿವೇಲ್​-ಮುತ್ತುಲಕ್ಷ್ಮಿ ಎಂಬ ದಂಪತಿ ಕಡಲೂರು ಜಿಲ್ಲೆಯ ವಿರುಧಾಚಲಂ ಮಣಲೂರಿನವರು. ಈ ದಂಪತಿಗೆ 2 ಹೆಣ್ಣು ಮತ್ತು 3 ಗಂಡು ಸೇರಿ ಒಟ್ಟು 5 ಮಕ್ಕಳಿದ್ದಾರೆ. ಬಡತನವಿದ್ದರೂ ದುಡಿದು ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಅದೊಂದು ದಿನ ಬರಸಿಡಿಲಿನಂತಹ ಘಟನೆ ನಡೆಯುತ್ತದೆ. ಕಳೆದ ಮಾರ್ಚ್​ನಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಯಜಮಾನ ಶಕ್ತಿವೇಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಈ ದುರ್ಘಟನೆಯಿಂದ ಕುಗ್ಗಿ ಹೋಗಿದ್ದ ಮುತ್ತುಲಕ್ಷ್ಮಿ, ಐವರು ಮಕ್ಕಳನ್ನು ಸಾಕಲು ಸಾಧ್ಯವಾಗದೇ, ವಾಸಿಸಲು ಒಂದು ಸೂರೂ ಇಲ್ಲದೇ ಪರದಾಡುತ್ತಿದ್ದರು.

ಶಕ್ತಿವೇಲ್ ಅಪಘಾತ ಪ್ರಕರಣವನ್ನು ವೃದ್ಧಾಚಲಂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಆರೋಗ್ಯರಾಜ್ ತನಿಖೆ ನಡೆಸುತ್ತಿದ್ದರು. ತನಿಖೆಯ ವೇಳೆ ಮುತ್ತುಲಕ್ಷ್ಮಿಯ ಬಡತನ, ತನ್ನ ಮಕ್ಕಳಿಗಾಗಿ ಪಡುತ್ತಿರುವ ಸಂಕಷ್ಟ ಕಂಡು ಸಹಾಯ ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ವೃದ್ದಾಚಲಂ ಉಪಜಿಲ್ಲೆ ವ್ಯಾಪ್ತಿಯ ಆಲಾಡಿ, ಕರುವೇಪಿಲಂಗುರಿಚಿ, ಕಮ್ಮಾಪುರಂ, ಮಂಗಳಂಪೇಟೆಗಳಲ್ಲಿ ಕುಟುಂಬದ ನರಳಾಟದ ಕುರಿತು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಮಾಹಿತಿ ರವಾನಿಸಿದ್ದಾರೆ.

ತಕ್ಷಣವೇ ಪ್ರತಿಕ್ರಿಯಿಸಿದ ಪನ್ನಡಂ ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಹಾಯಕ ನಿರೀಕ್ಷಕರು ಮತ್ತು ಕಾನ್‌ಸ್ಟೆಬಲ್‌ಗಳು ತಮ್ಮಿಂದಾದ ನೆರವು ಒದಗಿಸಿದರು. ಈ ಮೂಲಕ ಅವರು ಮತ್ತು ಸ್ವಯಂಸೇವಕರು ನೀಡಿದ ಮೊತ್ತ ಸೇರಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಉತ್ತಮ ಸ್ನಾನಗೃಹ, ಅಡುಗೆ ಕೋಣೆ, ಮಲಗುವ ಕೋಣೆ ಹೀಗೆ ಸಕಲ ಸೌಕರ್ಯಗಳಿರುವ ಸುಂದರ ಮನೆ ನಿರ್ಮಿಸಿದ್ದಾರೆ.

ಈ ಮನೆಯನ್ನು ನಿನ್ನೆ (ಅಕ್ಟೋಬರ್ 26) ಕಡಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾರಾಮ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಕೇವಲ ಮನೆಯಲ್ಲದೇ, ಬೇಕಾದ ಮೂಲ ಸೌಲಭ್ಯ ಹಾಸಿಗೆ, ಚಾಪೆ, ದಿಂಬು, ಗೃಹೋಪಯೋಗಿ ವಸ್ತುಗಳನ್ನು ಡೋಲು ಬಾರಿಸುತ್ತಾ ನೂತನ ಮನೆಗೆ ನೀಡಿದ್ದಾರೆ. ಇದಾಗಿ ತಮಿಳು ಸಂಪ್ರದಾಯದಂತೆ ಹೊಸ ಮನೆಯ ಗೃಹಪ್ರವೇಶ ಮಾಡಿಸಿ ಎಲ್ಲರಿಗೂ ಪೊಲೀಸರೇ ಊಟ ಹಾಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾರಾಂ, ಪ್ರತಿಯೊಬ್ಬರ ಹೃದಯದಲ್ಲೂ ಆರ್ದ್ರತೆ ಇರುತ್ತದೆ. ಆ ಆರ್ದ್ರತೆಯ ದ್ಯೋತಕವೇ ಈ ಸುಂದರ ಮನೆ. ವೃದ್ಧಾಚಲಂ ಮೂಲದ ಶಕ್ತಿವೇಲ್ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆ ಕುಟುಂಬಕ್ಕಾಗಿ ವೃದ್ದಾಚಲಂ ಪೊಲೀಸರು ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿ ಅದರಂತೆ ಇಂದು ಮನೆ ನಿರ್ಮಿಸಿದ್ದಾರೆ. ಇದಕ್ಕಾಗಿ ವೃದ್ಧಾಚಲಂ ಜಿಲ್ಲೆಯ ಎಲ್ಲ ಪೊಲೀಸರು ಒಗ್ಗೂಡಿ ಉತ್ತಮ ಕಾರ್ಯ ಮಾಡಿದ್ದಾರೆ. ಇದಕ್ಕೆ ನನ್ನ ಅಭಿನಂದನೆಗಳು ಎಂದು ಶ್ಲಾಘಿಸಿದರು.

ಇದೀಗ ರಸ್ತೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಮುತ್ತುಲಕ್ಷ್ಮಿ ಕುಟುಂಬಕ್ಕೆ ಮನೆ ಕಟ್ಟಿ ಕೊಡುವ ಮೂಲಕ ನೆರವಾಗಿರುವ ಪೊಲೀಸರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜನರನ್ನೇ ತನ್ನ ಕುಟುಂಬ ಎಂಬ ಭಾವನೆಯಿಂದ ಹಗಲಿರುಳು ಸಮಾಜಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಮನದಾಳದಿಂದ ಒಮ್ಮೆ ಹರಸೋಣ.

ಇದನ್ನೂ ಓದಿ:ಮೂರು ಬಾರಿ ಶಾಸಕ, ಸ್ವಂತ ಮನೆಯೂ ಇಲ್ಲ, ಪ್ರಯಾಣವೆಲ್ಲವೂ ಸಾರಿಗೆ ಬಸ್​ನಲ್ಲೇ.. ಇವರ ಜೀವನ ನಮಗೆ ಆದರ್ಶ!

ABOUT THE AUTHOR

...view details