ಚುಂಚುಪಲ್ಲಿ( ತೆಲಂಗಾಣ): ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಪತಿಯನ್ನೇ ಪತ್ನಿ ಕೊಲೆ ಮಾಡಿದ ಘಟನೆ ತೆಲಂಗಾಣದ ಚುಂಚುಪಲ್ಲಿಯಲ್ಲಿ ನಡೆದಿದೆ. ಕಳೆದ ತಿಂಗಳು ಮಹಿಳೆ ತನ್ನ ಪತಿಯನ್ನು ಕೊಂದಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಘಟನೆ ಡಿಸೆಂಬರ್ 29 ರಂದು ನಡೆದಿದೆ ಎಂದು ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ.
ಮೃತರನ್ನು ಚುಂಚುಪಲ್ಲಿ ಜಿಲ್ಲೆಯ ಗಾಂಧಿ ಕಾಲೋನಿ ನಿವಾಸಿ ಕೊಮ್ಮಾರಬೋನ ಶ್ರೀನಿವಾಸ್ (50) ಎಂದು ಗುರುತಿಸಲಾಗಿದೆ. ಚುಂಚುಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಸುಮನ್ ಪ್ರಕಾರ, ಮೃತ ಶ್ರೀನಿವಾಸ್ ಇವರು ಕೋತಗುಡೆಂ ಕಲೆಕ್ಟರೇಟ್‌ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಅಡುಗೆ ಕೋಣೆಯಲ್ಲಿ ಕಾಲು ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು ಎಂದು ಡಿ.29 ರ ಮಧ್ಯರಾತ್ರಿ ಅವರ ಪತ್ನಿ ಸೀತಾಮಹಾಲಕ್ಷ್ಮಿ (43) ಪತಿಯನ್ನು ಕೋತಗುಡೆಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸರು ಆರೋಪಿಯನ್ನು ಬಾಯಿಬಿಡಿಸಿದ್ದು ಹೇಗೆ?:ಆದರೆ, ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಶ್ರೀನಿವಾಸ್ ಮೃತಪಟ್ಟಿದ್ದರು. ಶ್ರೀನಿವಾಸ್ ಅವರ ಪುತ್ರ ಸಾಯಿಕುಮಾರ್ ತನ್ನ ತಂದೆಯ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು ಎಂದು ಸುಮನ್ ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿ ಮೃತಪಟ್ಟ ಕೂಡಲೇ ನಾಪತ್ತೆಯಾಗಿದ್ದ ಆರೋಪಿ ಮಹಿಳೆ ಮೇಲೆ ಕಣ್ಣಿಟ್ಟಿದ್ದರು. ಮಂಗಳವಾರ ರಾತ್ರಿ ಹೈದರಾಬಾದ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆಕೆಯನ್ನು ಕೋತಗುಡೆಂ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಪೊಲೀಸರ ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಪತಿ ಕುಡಿದು ಮನೆಗೆ ಬಂದು ಮಲಗಿದ್ದ ವೇಳೆ ಆತನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ನಂತರ ಆತನನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿ ಜಾರಿ ಬಿದ್ದಿರುವ ಭಂಗಿಯಲ್ಲಿ ಮಲಗಿಸಿದ್ದಾರೆ. ಪತಿ ತನಗೆ ವಿಪರೀತ ಕಿರುಕುಳ ನೀಡುತ್ತಿದ್ದುದರಿಂದ, ಅನುಕಂಪದ ಆಧಾರದಲ್ಲಿ ಆತನ ನೌಕರಿ ಪಡೆಯಲು ಆತನನ್ನು ಕೊಂದಿರುವುದಾಗಿ ಆರೋಪಿತ ಮಹಿಳೆ ಹೇಳಿದ್ದಾರೆ.
ಪತ್ನಿಯನ್ನು ಕೊಂದು ಶವ ತುಂಡರಿಸಿ ಎಸೆದ ಮತ್ತೊಂದು ಘಟನೆ ಬೆಳಕಿಗೆ: ದೆಹಲಿಯಲ್ಲಿ ತನ್ನ ಲಿವ್ ಇನ್ ಸಂಗಾತಿಯಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಭೀಕರ ಹತ್ಯೆಯ ಪ್ರಕರಣದ ನೆನಪು ಮಾಸುವ ಮುನ್ನವೇ ಇಂಥ ಮತ್ತೊಂದು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಅಕ್ರಮ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಶವವನ್ನು ಎರಡು ತುಂಡು ಮಾಡಿ ಮಹಾನಂದಾ ನದಿಗೆ ಎಸೆದಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಹಿಳೆಯ ದೇಹದ ಭಾಗಗಳನ್ನು ಪತ್ತೆ ಹಚ್ಚಲು ಶೋಧ ನಡೆಸುತ್ತಿದ್ದಾರೆ.
ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯ ನಿವಾಸಿ ರೇಣುಕಾ ಖಾತುನ್ ಎಂಬ ಮಹಿಳೆ ಹಲವು ದಿನಗಳಿಂದ ಕಾಣೆಯಾಗಿದ್ದರು. ಆಕೆಯ ಸಂಬಂಧಿಕರು ಡಿಸೆಂಬರ್ ಕೊನೆಯ ವಾರದಲ್ಲಿ ಕಾಣೆಯಾದ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಿಲಿಗುರಿ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸರು ರೇಣುಕಾ ಪತಿ ಮೊಹಮ್ಮದ್ ಅನ್ಸಾರುಲ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಹೆಂಡತಿಯನ್ನು ಕೊಂದು ಶವವನ್ನು ಎರಡು ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಮದ್ಯಪಾನ ಮಾಡ್ಬೇಡಿ ಎಂದಿದ್ದಕ್ಕೆ ಪತ್ನಿಯನ್ನು ಕೊಂದು ಹಾಕಿದ ಪತಿ