ನವದೆಹಲಿ: ಸಾಮಾನ್ಯವಾಗಿ ದಿನನಿತ್ಯ ಎಲ್ಲರೂ ಬಳಸುವ ಇಂಗ್ಲಿಷ್ ಪದಗಳನ್ನು ಟ್ರೇಡ್ಮಾರ್ಕ್ಗಳಾಗಿ ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಮತ್ತು ಅಂತಹ ಪದಗಳ ಮೇಲೆ ಯಾವುದೇ ವ್ಯಕ್ತಿಯು ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಸಾಮಾನ್ಯ ಇಂಗ್ಲಿಷ್ ಪದಗಳನ್ನು ಒಳಗೊಂಡಿರುವ ಟ್ರೇಡ್ ಮಾರ್ಕ್ ನೋಂದಣಿಗೆ ಅವಕಾಶ ನೀಡುವುದು ಇಡೀ ಭಾಷೆಯನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಇದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಮೂರ್ತಿ ಸಿ. ಹರಿಶಂಕರ್ ಹೇಳಿದರು.
"ಸಾಮಾನ್ಯವಾಗಿ ಬಳಸುವ ಪದಗಳು ಅಥವಾ ಸಾಮಾನ್ಯವಾಗಿ ಬಳಸುವ ಪದಗಳ ವಿಶಿಷ್ಟವಲ್ಲದ ಸಂಯೋಜನೆಯನ್ನು ಯಾವುದೇ ಒಬ್ಬ ವ್ಯಕ್ತಿಯ ಹೆಸರಲ್ಲಿ ಏಕಸ್ವಾಮ್ಯಗೊಳಿಸಲು ಸಾಧ್ಯವಿಲ್ಲ ಹಾಗೂ ಆ ಪದಗಳನ್ನು ಪ್ರಪಂಚದ ಇನ್ನಾರೂ ಬಳಸದಂತೆ ಮಾಡುವುದು ಸಾಧ್ಯವಿಲ್ಲ." ಎಂದು ನ್ಯಾಯಾಲಯ ಹೇಳಿತು.
"ಹಾಗಾಗಿಯೇ ಟ್ರೇಡ್ ಮಾರ್ಕ್ಸ್ ಕಾಯ್ದೆ, 1999 ರ ಸೆಕ್ಷನ್ 9 (1) (ಎ) ಪ್ರಕಾರ, ಒಬ್ಬ ವ್ಯಕ್ತಿಯ ಸರಕು ಅಥವಾ ಸೇವೆಗಳನ್ನು ಇನ್ನೊಬ್ಬರ ಸರಕುಗಳಿಂದ ಪ್ರತ್ಯೇಕಿಸಲು ಅಸಮರ್ಥವಾಗಿರುವ ವಿಶಿಷ್ಟತೆಯ ಕೊರತೆಯಿರುವ ಟ್ರೇಡ್ ಮಾರ್ಕ್ ನೋಂದಣಿಗೆ ಸಂಪೂರ್ಣ ನಿಷೇಧವಿದೆ. ದಿನನಿತ್ಯದ ಸಾಮಾನ್ಯ ಇಂಗ್ಲಿಷ್ ಬಳಕೆಯ ಪದಗಳು ಈ ವರ್ಗಕ್ಕೆ ಸೇರುತ್ತವೆ" ಎಂದು ದೆಹಲಿ ಹೈಕೋರ್ಟ್ ಹೇಳಿದೆ.