ನವದೆಹಲಿ: ಗಡಿ ವಲಯದಲ್ಲಿ ಸ್ಥಿರತೆ ಕಾಪಾಡಲು ಚೀನಾ ಮತ್ತು ಭಾರತ ಎರಡೂ ಬದ್ಧವಾಗಿವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಹೇಳಿದ್ದಾರೆ. ಚೀನಾ ಮತ್ತು ಭಾರತ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಸಂವಹನವನ್ನು ನಿರ್ವಹಿಸಿವೆ. ಗಡಿ ಪ್ರದೇಶಗಳಲ್ಲಿ ಸ್ಥಿರತೆ ಕಾಪಾಡಲು ಉಭಯ ದೇಶಗಳು ಬದ್ಧವಾಗಿವೆ. ಚೀನಾ-ಭಾರತ ಸಂಬಂಧಗಳ ಸ್ಥಿರ ಮತ್ತು ಉತ್ತಮ ಬೆಳವಣಿಗೆಯ ದಿಕ್ಕಿನಲ್ಲಿ ನಾವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದೇವೆ ವಾಂಗ್ ಯಿ ಹೇಳಿದರು.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಘರ್ಷಣೆಯ ನಂತರ ಭಾರತ ಮತ್ತು ಚೀನಾ ಡಿಸೆಂಬರ್ 20 ರಂದು ಚೀನಾ ಕಡೆಯ ಚುಶುಲ್-ಮೊಲ್ಡೊ ಗಡಿ ಸಭೆಯ ಸ್ಥಳದಲ್ಲಿ 17 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯನ್ನು ನಡೆಸಿವೆ ಮತ್ತು ಪಶ್ಚಿಮ ವಲಯ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಂತರದಲ್ಲಿ, ಪಶ್ಚಿಮ ವಲಯದ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಭಯ ಕಡೆಯವರು ನಿಕಟ ಸಂಪರ್ಕದಲ್ಲಿರಲು ಮತ್ತು ಮಿಲಿಟರಿ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಪರ್ಕ ಇಟ್ಟುಕೊಳ್ಳಲು ಮತ್ತು ಉಳಿದ ಸಮಸ್ಯೆಗಳ ಬಗ್ಗೆ ಪರಸ್ಪರ ಸ್ವೀಕಾರಾರ್ಹ ರೀತಿಯಲ್ಲಿ ಶೀಘ್ರ ಪರಿಹಾರ ರೂಪಿಸಲು ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಮುನ್ನ ಭಾರತದ ಹೇಳಿಕೆ:ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9 ರಂದು ನಡೆದ ಸಂಘರ್ಷದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಭಾರತದ ಗೃಹಸಚಿವ ರಾಜನಾಥ್ ಸಿಂಗ್, ನಮ್ಮ ಭೂಪ್ರದೇಶವನ್ನು ಪಿಎಲ್ಎ ಸೈನಿಕರು ಅತಿಕ್ರಮಿಸದಂತೆ ಭಾರತೀಯ ಸೇನೆಯು ಧೈರ್ಯದಿಂದ ತಡೆಯಿತು ಮತ್ತು ಅವರು ಹಿಂದೆ ಸರಿಯುವಂತೆ ಮಾಡಿತು. ಈ ಸಂಘರ್ಷದಲ್ಲಿ ಎರಡೂ ಕಡೆಯ ಕೆಲ ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.
ಈ ಬಗ್ಗೆ ಹೇಳಿಕೆ ನೀಡಿದ ಚೀನಾದ ವಿದೇಶಾಂಗ ಸಚಿವಾಲಯ, ಭಾರತದ ಗಡಿಯುದ್ದಕ್ಕೂ ಸ್ಥಿತಿ ಬಹುತೇಕ ಸಹಜವಾಗಿದೆ ಎಂದು ಹೇಳಿತ್ತು. ತನ್ನ ಯೋಧರು ಚೀನಾ ಗಡಿಯೊಳಗೆ ನಿಯಮಿತ ಗಸ್ತು ತಿರುಗುತ್ತಿರುವಾಗ ಭಾರತೀಯ ಯೋಧರು ಅವರನ್ನು ತಡೆದ ಕಾರಣಕ್ಕೆ ಘರ್ಷಣೆ ಏರ್ಪಟ್ಟಿತು ಎಂದು ಪಿಎಲ್ಎ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ಸೀನಿಯರ್ ಕರ್ನಲ್ ಲಾಂಗ್ ಶೋಹುವಾ ಹೇಳಿದ್ದಾರೆ.
ಅಮೆರಿಕ ಪ್ರತಿಕ್ರಿಯೆ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನಡೆದ ಭಾರತ ಚೀನಾ ಯೋಧರ ಘರ್ಷಣೆಯ ನಂತರ ಇದೀಗ ಭಾರತ ಮತ್ತು ಚೀನಾ ಎರಡೂ ದೇಶಗಳು ಸಂಘರ್ಷದಿಂದ ಹಿಂದೆ ಸರಿದಿರುವುದು ಉತ್ತಮ ಬೆಳವಣಿಗೆ ಮತ್ತು ಸಂತಸ ತಂದಿದೆ ಎಂದು ಅಮೆರಿಕ ಹೇಳಿದೆ. ಇತ್ತೀಚೆಗೆ ವಾಶಿಂಗ್ಟನ್ನ ಶ್ವೇತಭವನದಲ್ಲಿ ನಡೆದ (ಸ್ಥಳೀಯ ಕಾಲಮಾನ) ಮಾಧ್ಯಮಗೋಷ್ಟಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು, ಭಾರತ-ಚೀನಾ ಯೋಧರ ಘರ್ಷಣೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಭಾರತ ಮತ್ತು ಚೀನಾ ಶಾಂತಿ ಕಾಪಾಡುತ್ತಿರುವುದಕ್ಕೆ ಬೈಡನ್ ಆಡಳಿತಕ್ಕೆ ಸಂತೋಷವಾಗಿದೆ ಎಂದಿದ್ದಾರೆ. ಅಲ್ಲದೇ ವಿವಾದಿತ ಗಡಿಗಳ ಬಗ್ಗೆ ಚರ್ಚಿಸಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಾರ್ಗಗಳನ್ನು ಬಳಸುವಂತೆ ಎರಡೂ ರಾಷ್ಟ್ರಗಳಿಗೆ ಅಮೆರಿಕ ಸಲಹೆ ನೀಡಿದೆ.
ಇದನ್ನೂ ಓದಿ: ಚೀನಾ ಗಡಿ ಸಮೀಪ ಭಾರತ-ಯುಎಸ್ ಸೇನೆಯಿಂದ ಸಮರಾಭ್ಯಾಸ: ವಿಡಿಯೋ