ನವದೆಹಲಿ: ಸಾಂವಿಧಾನಿಕ ಮೌಲ್ಯಗಳು ಮತ್ತು ಆದರ್ಶಗಳನ್ನು ಸಂರಕ್ಷಿಸಲು ಎಲ್ಲ ಸಂಸದರು ಬದ್ಧರಾಗಿರಬೇಕೆಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ದೇಶದ ಸಂಸತ್ತಿನ ಭವ್ಯ ಪರಂಪರೆಯ ನಿಮಿತ್ತ ಹಳೆ ಸಂಸತ್ತಿನ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಮಂಗಳವಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇದೇ ಚೇಂಬರ್ನಲ್ಲಿ ಸಂವಿಧಾನ ಸಭೆಯ ಸಭೆಗಳನ್ನು ನಡೆಸಲಾಗಿತ್ತು ಎಂದು ಸ್ಮರಿಸಿದರು.
ಸಂಸದರ ಸಾಮೂಹಿಕ ಪ್ರಯತ್ನಗಳು ಒಂದು ರಾಷ್ಟ್ರವಾಗಿ ಭಾರತದ ಬೆಳವಣಿಗೆಗೆ ಉತ್ತಮ ಅಡಿಪಾಯ ರೂಪಿಸಿವೆ. ಸಾಂವಿಧಾನಿಕ ಮೌಲ್ಯಗಳು ಮತ್ತು ಆದರ್ಶಗಳ ಪಾಲನೆಯಲ್ಲಿ ಸಂವಿಧಾನದ ಯಶಸ್ಸು ಅಡಗಿದೆ. ಸಾಂವಿಧಾನಿಕ ಸಂಸ್ಥೆಗಳ ಪವಿತ್ರ ಮತ್ತು ಯಶಸ್ಸಿಗೆ ಅತ್ಯಗತ್ಯ ಎಂಬ ಕಲ್ಪನೆಯು ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಮೂಲಭೂತ ತತ್ವವಾಗಿದೆ ಎಂದು ಅವರು ತಿಳಿಸಿದರು.
ದೇಶವು ಮುನ್ನಡೆಯುತ್ತಿರುವಾಗ ಸಾಂವಿಧಾನಿಕ ಮೌಲ್ಯಗಳು ಮತ್ತು ಸಂಸದೀಯ ಸಂಪ್ರದಾಯಗಳನ್ನು ಸಂರಕ್ಷಿಸಲು ನಾವು ಬದ್ಧರಾಗಿರಬೇಕು. ನಮ್ಮ ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ನಾವು ರಾಷ್ಟ್ರವನ್ನು ಕಟ್ಟಲು ಹಾಗೂ ರಾಷ್ಟ್ರ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಂದಾಗಬೇಕು. ಇದೇ ನಮ್ಮ ಗುರಿಯಾಗಬೇಕು ಎಂದು ಖರ್ಗೆ ಹೇಳಿದರು.
ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆಗಳನ್ನೂ ಕಾಂಗ್ರೆಸ್ ಅಧ್ಯಕ್ಷ ಸ್ಮರಿಸಿದರು. ಅಂದಿನ ಸ್ಪೀಕರ್ ಜಿವಿ ಮಾವ್ಲಂಕರ್ ಮತ್ತು ಎಸ್. ರಾಧಾಕೃಷ್ಣನ್ ಅವರನ್ನೂ ನೆನಪಿಸಿಕೊಂಡರು. ಜೊತೆಗೆ ಸಂವಿಧಾನ ಸಭೆ, ತಾತ್ಕಾಲಿಕ ಸಂಸತ್ತು ಮತ್ತು ನಂತರದ ಎಲ್ಲ ಲೋಕಸಭೆಯ ಸದಸ್ಯರ ಸಾಮೂಹಿಕ ಕೊಡುಗೆಯನ್ನು ಖರ್ಗೆ ಸ್ಮರಿಸಿದರು.
ಸೋಮವಾರ ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ನೆಹರೂ ಅವರನ್ನು ನೆನಪಿಸಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಖರ್ಗೆ ಧನ್ಯವಾದ ಅರ್ಪಿಸಿದರು. ಪಂಡಿತ್ ನೆಹರು ಅವರ 'ಟ್ರಸ್ಟ್ ವಿತ್ ಡೆಸ್ಟಿನಿ' ಭಾಷಣಕ್ಕೆ ಈ ಸೆಂಟ್ರಲ್ ಹಾಲ್ ಸಾಕ್ಷಿಯಾಗಿತ್ತು. ನಿನ್ನೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ. ನೆಹರು ಅವರ ಐತಿಹಾಸಿಕ ಭಾಷಣವನ್ನು ನೀವು ನೆನಪಿಸಿಕೊಂಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದರು.