ಭಾರತೀಯ ನೌಕಾಪಡೆಯು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಐಎಸಿ ವಿಕ್ರಾಂತ್ ಯುದ್ಧ ನೌಕೆ ಸೆಪ್ಟೆಂಬರ್ 2ರಂದು ಕಾರ್ಯಾರಂಭಿಸಲಿದೆ. ಆತ್ಮನಿರ್ಭರ ಭಾರತದೆಡೆಗಿನ ಇಡೀ ರಾಷ್ಟ್ರದ ಬದ್ಧತೆಗಿದು ಹೆಗ್ಗುರುತಾಗಲಿದೆ. ಇದರ ವಿಶೇಷತೆಗಳು ಹೀಗಿವೆ.
ಸ್ವದೇಶಿ ನಿರ್ಮಿತ ಮೊದಲ ಯುದ್ಧನೌಕೆ ವಿಕ್ರಾಂತ್ 1. ವಿಕ್ರಾಂತ್ ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆ. ಭಾರತೀಯ ನೌಕಾಪಡೆಗಾಗಿ ಮೊದಲ ಬಾರಿಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ವಿಮಾನವಾಹಕ ನೌಕೆ ಇದಾಗಿದೆ.
2. ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ (WDB) ವಿನ್ಯಾಸಗೊಳಿಸಿದೆ. ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವಾಲಯದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL)ನಲ್ಲಿ ನಿರ್ಮಿಸಲಾಗಿದೆ. ಸ್ವದೇಶಿ ನಿರ್ಮಿತ ನೌಕೆಗೆ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ವಿಮಾನವಾಹಕ ನೌಕೆಯ ಹೆಸರನ್ನೇ ಇಡಲಾಗಿದೆ ಎಂಬುವುದಿಲ್ಲಿ ವಿಶೇಷ.
ಸ್ವದೇಶಿ ನಿರ್ಮಿತ ಮೊದಲ ಯುದ್ಧನೌಕೆ ವಿಕ್ರಾಂತ್ 3. ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂಬ ಅರ್ಥವನ್ನು ಕೊಡುತ್ತದೆ. 2005ರ ಏಪ್ರಿಲ್‌ನಲ್ಲಿ ಸ್ಟೀಲ್ ಕಟಿಂಗ್ ಮೂಲಕ ಈ ನೌಕೆಗೆ ಭದ್ರ ಅಡಿಪಾಯ ಹಾಕಲಾಗಿತ್ತು. ಸ್ವದೇಶೀಕರಣ ನಿಟ್ಟಿನಲ್ಲಿ ಈ ನೌಕೆ ನಿರ್ಮಾಣಕ್ಕೆ ಅಗತ್ಯವಾದ ಯುದ್ಧ ನೌಕೆ ದರ್ಜೆಯ ಉಕ್ಕನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (DRDL) ಮತ್ತು ಭಾರತೀಯ ನೌಕಾಪಡೆಯ ಸಹಯೋಗದೊಂದಿಗೆ ಪೂರೈಸಲಾಗಿದೆ. ಇದರ ಕವಚ (ಹಲ್) ತಯಾರಿಕೆಯ ನಂತರ ಇದರ ನಿರ್ಮಾಣದ ಪ್ರಗತಿ ಸಾಧಿಸಿತು. 2009ರ ಫೆಬ್ರವರಿಯಲ್ಲಿ ನೌಕೆಯ ಕೀಲ್ (keel) ಹಾಕಲಾಯಿತು. 2013ರ ಆಗಸ್ಟ್ನಲ್ಲಿ ನೌಕೆಗೆ ಚಾಲನೆ ನೀಡುವ ಮೂಲಕ ನೌಕೆಯ ನಿರ್ಮಾಣದ ಮೊದಲ ಹಂತದ ಕಾರ್ಯ ಯಶಸ್ವಿಯಾಗಿತ್ತು.
ಸ್ವದೇಶಿ ನಿರ್ಮಿತ ಮೊದಲ ಯುದ್ಧನೌಕೆ ವಿಕ್ರಾಂತ್ 4. ವಿಕ್ರಾಂತ್ ನೌಕೆಯು 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲ ಇದೆ. ಈ ನೌಕೆಯನ್ನು ಸಂಪೂರ್ಣವಾಗಿ ಲೋಡ್ ಮಾಡಿದಾಗ ಸರಿಸುಮಾರು 43 ಸಾವಿರ ಟನ್ ಭಾರವಾಗುತ್ತದೆ. ಪ್ರತಿ ಗಂಟೆಗೆ 28 ನಾಟಿಕಲ್ ಮೈಲಿ ವೇಗವನ್ನು ಹೊಂದಿದೆ. ಸುಮಾರು 2,200 ಕಂಪಾರ್ಟ್‌ಮೆಂಟ್ ಇವೆ. ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗಾಗಿಯೇ ವಿಶೇಷ ಕ್ಯಾಬಿನ್ ಇದ್ದು, ಸುಮಾರು 1,600 ಸಿಬ್ಬಂದಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಇತ್ತೀಚಿನ ಅತ್ಯಾಧುನಿಕ ಉಪಕರಣಗಳು ಮತ್ತು ವೈದ್ಯಕೀಯ ವ್ಯವಸ್ಥೆಗಳೊಂದಿಗೆ ಈ ನೌಕೆ ಸಜ್ಜುಗೊಂಡಿದೆ. ಈ ನೌಕೆಯಲ್ಲಿ ತುರ್ತು ಮಾಡ್ಯುಲರ್, ಫಿಸಿಯೋಥೆರಪಿ ಕ್ಲಿನಿಕ್, ಐಸಿಯು, ಪ್ರಯೋಗಾಲಯಗಳು, ಸಿಟಿ ಸ್ಕ್ಯಾನರ್, ಎಕ್ಸ್-ರೇ ಯಂತ್ರಗಳು, ಐಸೋಲೇಶನ್ ವಾರ್ಡ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಸೌಲಭ್ಯಗಳೊಂದಿಗೆ ಸಂಪೂರ್ಣ ವೈದ್ಯಕೀಯ ಸಂಕೀರ್ಣ ಹಾಗೂ ಟೆಲಿಮೆಡಿಸಿನ್ ಸೌಲಭ್ಯಗಳಿವೆ.
ಸ್ವದೇಶಿ ನಿರ್ಮಿತ ಮೊದಲ ಯುದ್ಧನೌಕೆ ವಿಕ್ರಾಂತ್ 5. ಆಗಸ್ಟ್ 21ರಿಂದ ಇಲ್ಲಿಯವರೆಗೆ ಬಹು ಹಂತದ ಸಮುದ್ರ ಪ್ರಯೋಗಗಳನ್ನು ವಿಕ್ರಾಂತ್ ನೌಕೆ ಯಶಸ್ವಿಯಾಗಿ ಪೂರೈಸಿದೆ. ನೌಕೆಯ ಕಾರ್ಯಕ್ಷಮತೆ, ಕಾರ್ಯಾಚರಣೆ, ಕುಶಲ ಪ್ರಯೋಗಗಳು, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ (ಪಿಜಿಡಿ), ನ್ಯಾವಿಗೇಷನ್ ಮತ್ತು ಸಂವಹನ ವ್ಯವಸ್ಥೆ, ಪ್ರೊಪಲ್ಷನ್ ಯಂತ್ರಗಳ ಪರೀಕ್ಷೆ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಸೂಟ್‌ಗಳು, ಡೆಕ್ ಯಂತ್ರೋಪಕರಣಗಳು, ಜೀವರಕ್ಷಕ ಉಪಕರಣಗಳು ಸೇರಿದಂತೆ ಇತರ ಸಹಾಯಕ ಸಾಧನಗಳ ಪ್ರಯೋಗಗಳನ್ನು ಭಾರತೀಯ ನೌಕಾಪಡೆಯ ತಂಡ ಮತ್ತು ನೌಕೆಯ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.
6. ವಿಕ್ರಾಂತ್ ನೌಕೆಯು ದೊಡ್ಡ ಮೊಟ್ಟದಲ್ಲಿ ಸ್ವದೇಶಿ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಹೊಂದಿದೆ. ಇದು ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಗಳಾದ ಬಿಇಎಲ್, ಬಿಹೆಚ್ಇಲ್, ಜಿಆರ್ಎಸ್ಇ, ಕೆಲ್ಟ್ರೊನ್, ಕಿರ್ಲೋಸ್ಕರ್, ಎಲ್ ಅಂಡ್ ಟಿ, ವಾರ್ಟ್ಸಿಲಾ ಇಂಡಿಯಾ ಹಾಗೂ 100ಕ್ಕೂ ಹೆಚ್ಚು ಎಂಎಸ್ಎಂಇಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ಇದರೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೂ ಕಾರಣವಾಗಿವೆ. ಜೊತೆಗೆ 2 ಸಾವಿರ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸಿಬ್ಬಂದಿ ಮತ್ತು ಇದಕ್ಕೆ ಸಹಕಾರ ನೀಡಿದ ಕೈಗಾರಿಕೆಗಳಲ್ಲಿ ಸುಮಾರು 13 ಸಾವಿರ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳ ಸೃಷ್ಟಿಗೂ ಕಾರಣಗಿದೆ. ಅಲ್ಲದೇ, ಯುದ್ಧನೌಕೆ ಉಕ್ಕಿನ ವಿಷಯದಲ್ಲಿ ದೇಶವು ಸ್ವಾವಲಂಬಿಯಾಗಲು ಅನುವು ಮಾಡಿಕೊಟ್ಟಿದೆ.
7. ಈ ನೌಕೆಯು ಮಿಗ್-29ಕೆ ಫೈಟರ್ ಜೆಟ್‌ಗಳು, ಕಾಮೊವ್-31, ಎಂಹೆಚ್-60ಆರ್ ಹೆಲಿಕಾಪ್ಟರ್ನಂತಹ 30 ವಿಮಾನಗಳು ಹಾಗೂ ಜೊತೆಗೆ ಸ್ಥಳೀಯವಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ಎಎಲ್ಹೆಚ್) ಮತ್ತು ಲಘು ಯುದ್ಧ ವಿಮಾನ (ಎಲ್ಸಿಎ) ಒಳಗೊಂಡಿರುವ ಏರ್ವಿಂಗ್ ಅನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಶಾರ್ಟ್ ಟೇಕ್ ಆಫ್ ಆದರೆ ಅರೆಸ್ಟೆಡ್ ರಿಕವರಿ (STOBAR) ಎಂದು ಕರೆಯಲ್ಪಡುವ ಹೊಸ ವಿಮಾನ ಕಾರ್ಯಾಚರಣೆ ಮೋಡ್ ಹೊಂದಿದೆ.
8. ಸೆಪ್ಟೆಂಬರ್ 2ರಂದು ವಿಕ್ರಾಂತ್’ ಕಾರ್ಯಾರಂಭ ಮಾಡುವುದರೊಂದಿಗೆ ಭಾರತವು ಸ್ವದೇಶಿ ವಿಮಾನ ನಿರ್ಮಾಣ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಇದು ಮೇಕ್ ಇನ್ ಇಂಡಿಯಾಕ್ಕೆ ನಿಜವಾದ ಸಾಕ್ಷಿಯಾಗಿದೆ. ಜೊತೆಗೆ ಹಿಂದೂ ಮಹಾಸಾಗರದಲ್ಲಿ ವರ್ಧಿತ ಕಡಲ ಭದ್ರತೆಯ ಕಡೆಗೆ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.