ಮೀರತ್:ಮೀರತ್ ಆಯುಕ್ತರ ಸಾಕು ಶ್ವಾನ ನಾಪತ್ತೆ ಆಗಿದೆ. ಭಾನುವಾರ ಸಂಜೆಯಿಂದ ಶ್ವಾನದ ಸುಳಿವಿಲ್ಲ. ಹುಡುಕಾಟ ನಡೆಸಿದರೂ ನಾಯಿ ಪತ್ತೆ ಆಗಿಲ್ಲ. ಹಿರಿಯ ಅಧಿಕಾರಿಯ ಸಾಕುನಾಯಿ ನಾಪತ್ತೆಯಾಗಿದ್ದರಿಂದ ಪೊಲೀಸ್ ಇಲಾಖೆಯ ಮಾತ್ರವಲ್ಲದೇ, ಆಯುಕ್ತರ ತಂಡ ಕೂಡ ಹುಡುಕಾಟ ನಡೆಸಿದೆ.
ನಾಪತ್ತೆ ಪ್ರಕರಣ ದಾಖಲಾಗಿಲ್ಲ: ಸ್ಥಳೀಯ ಪೊಲೀಸ್ ಆಡಳಿತ ತಂಡ ಆಯುಕ್ತರ ಸಾಕುನಾಯಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಆದರೆ, ಈ ಬಗ್ಗೆ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ಮೂಲಗಳ ಪ್ರಕಾರ, ಆಯುಕ್ತೆ ಸೆಲ್ವ ಕುಮಾರಿ ಜೆ ಅವರು ಬಿಳಿ ಕಪ್ಪು ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ಸಾಕಿದ್ದರು. ಅದರ ವಯಸ್ಸು ಎರಡೂವರೆಯಿಂದ ಮೂರು ವರ್ಷ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲರೂ ಮೌನ ವಹಿಸಿದ್ದಾರೆ. ಆದರೆ, ಅಲ್ಲಿ ಕಮಿಷನರ್ ಅವರ ಶ್ವಾನ ಪತ್ತೆಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಅವರು ಯಾವ ವಿಚಾರವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಹುಡುಕಾಟ ಮುಂದುವರೆದಿದೆ.
ತನಿಖೆ ನಡೆಸುತ್ತಿರುವ ಪೊಲೀಸರು: ಮೂಲಗಳ ಪ್ರಕಾರ, ಆಯುಕ್ತರ ನಿವಾಸ ಮತ್ತು ಸುತ್ತಮುತ್ತ ಎಲ್ಲಿಯೂ ಶ್ವಾನದ ಸುಳಿವು ಇಲ್ಲದಿರುವ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಲಾಗುತ್ತಿದೆ. ಉದ್ಯೋಗಿಯೊಬ್ಬರು ಮಾತನಾಡಿ, ಪೊಲೀಸ್ ತಂಡ ಮತ್ತು ಆಯುಕ್ತರು ಅನೇಕ ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಸಾಕು ಶ್ವಾನವನ್ನು ಯಾರಾದರೂ ಎತ್ತಿಕೊಂಡು ಹೋಗಿದ್ದಾರೋ ಅಥವಾ ಬಂಗಲೆಯಿಂದ ಹೊರಗೆ ಹೋದ ನಂತರ ದಾರಿ ತಪ್ಪಿದೆಯೋ ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.