ನವದೆಹಲಿ:ರೈತರಿಗೆ ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಸುಮಾರು ಮೂರೂವರೆ ಕೋಟಿ ದೋಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿಯ ಆರ್ಥಿಕ ಅಪರಾಧ ಶಾಖೆಯ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಉತ್ತರ ದೆಹಲಿಯ ನರೇಲಾ ಮೂಲದವನಾದ ಪ್ರೇಮ್ಚಂದ್ ಬಂಧಿತನಾಗಿದ್ದು, ನರೇಲಾದಲ್ಲಿ ಜಗಾರಾಮ್ ಅಂಡ್ ಸನ್ಸ್ ಎಂಬ ಕೃಷಿ ಉತ್ಪನ್ನಗಳ ಮಂಡಿಯೊಂದರ ಮಾಲೀಕನಾಗಿದ್ದನು. ರೈತರು ತಮ್ಮ ಉತ್ಪನ್ನಗಳನ್ನು ಪ್ರೇಮ್ಚಂದ್ಗೆ ಮಾರಾಟ ಮಾಡಿದ್ದರು.
ತಾನು ಖರೀದಿಸಿದ ಕೃಷಿ ಉತ್ಪನ್ನಕ್ಕೆ ಹಣ ಕೊಡದ ಆತ ಹೆಚ್ಚಿನ ಬಡ್ಡಿ ಕೊಡುತ್ತೇನೆಂದು ರೈತರಿಗೆ ಪ್ರೇಮ್ಚಂದ್ ಆಮಿಷ ಒಡ್ಡಿದ್ದನು. ರೈತರು ಪ್ರೇಮ್ ಚಂದ್ ಅಂಗಡಿಗೆ ಧಾನ್ಯ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದರು.
ಕೆಲವು ದಿನಗಳ ನಂತರ ಹಣ ನೀಡದ ಪ್ರೇಮ್ ಚಂದ್ ತನ್ನ ಕುಟುಂಬದೊಂದಿಗೆ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಸುಮಾರು ಒಂದೂವರೆ ಕೋಟಿ ರೂಪಾಯಿ ರೈತರಿಗೆ ಪ್ರೇಮ್ ಚಂದ್ ನೀಡಬೇಕಿತ್ತು. ಈ ಕುರಿತು ರೈತರು ಪೊಲೀಸರಿಗೆ ದೂರು ನೀಡಿದ್ದರು.
ಸುಮಾರು 64 ರೈತರಿಗೆ ವಂಚನೆ ಮಾಡಲಾಗಿದ್ದು, 2017-18ರಿಂದಲೇ ರೈತರಿಗೆ ಈ ರೀತಿಯಾಗಿ ಆಮಿಷವೊಡ್ಡಲಾಗಿತ್ತು. ಆರ್ಥಿಕ ಅಪರಾಧ ಶಾಖೆಯ ಎಸ್‌ಐ ಶಿವದೇವ್ ಸಿಂಗ್ ಮತ್ತು ಎಚ್‌ಸಿ ಜೈ ಕನ್ವಾರ್ ಅವರ ತಂಡವು ಆಗಸ್ಟ್ 3 ರಂದು ಆರೋಪಿ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಸಾಲದ ಕಾರಣದಿಂದ ಪ್ರೇಮ್ ಚಂದ್ ರೈತರಿಗೆ ವಂಚಿಸಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಸಚಿವರ ಸಭೆಗೆ ಆಗಮಿಸುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ: ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ!