ದೇಶದ ಗಮನ ಸೆಳೆದಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಐದು ರಾಜ್ಯಗಳ ಪೈಕಿ ಪಂಜಾಬ್ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಆಮ್ ಆದ್ಮಿ ಪಕ್ಷ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಒಂದು ಕಾಲದ ಕಾಮಿಡಿಯನ್ ಆಗಿದ್ದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಪಂಜಾಬ್ ಅಧಿಕಾರದ ಚುಕ್ಕಾಣಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಹೌದು, ಸದಾ ಹಳದಿ ಪಗಡಿಯಲ್ಲೇ ಮಿಂಚುವ 48 ವರ್ಷದ ಭಗವಂತ್ ಮನ್ ಒಂದು ಕಾಲದಲ್ಲಿ ಕಾಮಿಡಿಯನ್ ಆಗಿದ್ದರು. 1973ರಲ್ಲಿ ಸಂಗ್ರೂರಿನ ಸತೋಜ್ ಗ್ರಾಮದಲ್ಲಿ ಜನಿಸಿದ್ದ ಮನ್, ಹಾಸ್ಯನಟರಾಗಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 'ಜುಗ್ನು ಮಸ್ತ್ ಮಸ್ತ್' ಎಂಬ ಟಿವಿ ಶೋನಲ್ಲಿ ತಮ್ಮ ಹಾಸ್ಯದಿಂದಲೇ ಜನಪ್ರಿಯತೆಯನ್ನು ಗಳಿಸಿದ್ದರು. ಅಲ್ಲದೇ, ಹಲವು ಹಾಸ್ಯ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದರು. ಹೀಗಿದ್ದ ಮನ್ 2011ರಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪಂಜಾಬ್ ಪೀಪಲ್ಸ್ ಪಕ್ಷವನ್ನು ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಹೀಗೆ ರಾಜಕೀಯಕ್ಕೆ ಬಂದ ಸರಿಯಾಗಿ ಹತ್ತು ವರ್ಷದಲ್ಲೇ ಈಗ ಪಂಜಾಬ್ ಮುಖ್ಯಮಂತ್ರಿ ಗಾದಿಗೆ ಏರಲು ಮನ್ ಸಿದ್ಧವಾಗಿದ್ದಾರೆ.
ಸೋತು ಗೆದ್ದ ಭಗವಂತ್:ರಾಜಕೀಯಕ್ಕೆ ಸೇರಿದ್ದ ಒಂದು ವರ್ಷದಲ್ಲೇ ಭಗವಂತ್ ಮನ್ ಚುನಾವಣೆಗೆ ನಿಂತು ಸೋತಿದ್ದರು. 2012ರಲ್ಲಿ ಅವರು ಲೆಹ್ರಗಾಗಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಅವರು, ಅಲ್ಲಿಂದ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದರು.
2014ರಲ್ಲಿ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಸುಖದೇವ್ ಸಿಂಗ್ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಪಂಜಾಬ್ ರಾಜಕೀಯದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡರು. ಎರಡೇ ಅವಧಿಗೂ ಆಯ್ಕೆಯಾಗಿ ಪ್ರಭಾವಿ ನಾಯಕರಾದರು. ಅಲ್ಲದೇ, ಪಂಜಾಬ್ನಲ್ಲಿ ಆಪ್ಗೆ ಗಟ್ಟಿ ನೆಲೆಯನ್ನೂ ತಂದು ಕೊಟ್ಟರು. ಅಲ್ಲದೇ, ಆಪ್ನಲ್ಲಿ ಅರವಿಂದ್ ಕೇಜ್ರಿವಾಲ್ ಬಳಿಕ ಎರಡನೇ ಪ್ರಮುಖ ನಾಯಕನ ಮಟ್ಟಕ್ಕೆ ಬೆಳೆದರು.