ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ):ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಬುಧವಾರ ಭಾರತೀಯ ಸೇನೆಯ ಮೂವರು ಹಿರಿಯ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಕೂಡ ಒಬ್ಬರರಾಗಿದ್ದು, ಇವರ ನಿವೃತ್ತಿಗೆ ಕೇವಲ ನಾಲ್ಕು ತಿಂಗಳ ಮಾತ್ರ ಬಾಕಿ ಇತ್ತು. ಹರಿಯಾಣ ಮೂಲದ ಕರ್ನಲ್ ಮನ್‌ಪ್ರೀತ್ ಅವರ ಕುಟುಂಬವು ಮೂರು ತಲೆಮಾರುಗಳಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದೆ. ಇವರ ನಿಧನದಿಂದ ಹುಟ್ಟೂರು ಶೋಕ ಸಾಗರದಲ್ಲಿ ಮುಳುಗಿದೆ.
ಇದನ್ನೂ ಓದಿ:ಹುತಾತ್ಮ ಮಗನಿಗೆ ತಂದೆಯ ವೀರನಮನ; ಮೆಚ್ಚುಗೆಗೆ ಪಾತ್ರವಾದ ನಿವೃತ್ತ ಐಜಿಪಿಯ ದೃಢತೆ
19ನೇ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಆಗಿದ್ದ ಮನ್‌ಪ್ರೀತ್ ಸಿಂಗ್ ಅನಂತನಾಗ್‌ನಲ್ಲಿ ಉಂಟಾದ ಭಯೋತ್ಪಾದಕರೊಂದಿಗಿನ ಭೀಕರ ಎನ್‌ಕೌಂಟರ್‌ನಲ್ಲಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಇವರ ಸಾವಿನ ಸುದ್ದಿಯು ಅವರ ಹುಟ್ಟೂರಾದ ಹರಿಯಾಣದ ಪಂಚಕುಲ ಮತ್ತು ಸಮೀಪದ ಪಂಜಾಬ್‌ನ ಮೊಹಾಲಿಯ ಮೂಲ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಇಂದು ಈ ವೀರ ಯೋಧನ ಪಾರ್ಥಿವ ಶರೀರವನ್ನು ಮೊಹಾಲಿ ಜಿಲ್ಲೆಯ ಭಂಜೋರಿಯಾ ಎಂಬ ಅವರ ಪೂರ್ವಜರ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತದೆ.
ಕರ್ನಲ್ ಮನ್‌ಪ್ರೀತ್ ಸಿಂಗ್ ಕುಟುಂಬವು ದೇಶ ಸೇವೆಯ ಪರಂಪರೆಯನ್ನೇ ಹೊಂದಿದೆ. ಇವರು ಸಿಂಗ್ ಕುಟುಂಬದ ಹೆಮ್ಮೆಯ ಕುಡಿಯಾಗಿದ್ದರು. ತಮ್ಮ ಅಜ್ಜ ಶೀತಲ್ ಸಿಂಗ್, ತಂದೆ ದಿವಂಗತ ಲಖ್ಮೀರ್ ಸಿಂಗ್ ಹಾಗೂ ಚಿಕ್ಕಪ್ಪ ರಂಜಿತ್ ಸಿಂಗ್ ಅವರ ಹಾದಿಯಲ್ಲೇ ಮನ್‌ಪ್ರೀತ್ ಕೂಡ ಆಗಿದ್ದರು. ಇವರೆಲ್ಲರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಯಿಂದ ನಿವೃತ್ತರಾದ ನಂತರ ಮನ್‌ಪ್ರೀತ್ ಸಿಂಗ್ ಅವರ ತಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ವಿವಿ ಭದ್ರತೆಗೆ ತಮ್ಮ ಬದ್ಧತೆ ಮುಂದುವರೆಸಿದ್ದರು. ಮತ್ತೊಂದೆಡೆ, ಪುತ್ರ ಮನ್‌ಪ್ರೀತ್ ತಂದೆ ಮರಣದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸಕ್ರಿಯವಾಗಿ ದೇಶ ಸೇವೆಯಲ್ಲಿ ತೊಡಗಿದ್ದರು. ಈ ಮೂಲಕ ರಾಷ್ಟ್ರಕ್ಕೆ ತಮ್ಮ ಕುಟುಂಬದ ನಿಸ್ವಾರ್ಥ ಸಮರ್ಪಣೆಯ ಪರಂಪರೆಯನ್ನು ಮುಂದುವರೆಸಿದ್ದರು.
ಇದನ್ನೂ ಓದಿ:ಜಮ್ಮು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಡಿಎಸ್‌ಪಿ ಹುಮಾಯೂನ್ ಮುಜಾಮ್ಮಿಲ್ ಅಂತ್ಯಕ್ರಿಯೆ
ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಪತ್ನಿ ಜಗ್‌ಮೀತ್ ಮತ್ತು ಇಬ್ಬರು ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುತಾತ್ಮರಾದ ಸುದ್ದಿ ತಿಳಿದು ಇಡೀ ಕುಟುಂಬವು ದುಃಖದಲ್ಲಿ ಮುಳುಗಿದೆ. ಆರಂಭದಲ್ಲಿ ಮನ್ಪೀತ್ ಸಿಂಗ್ ಅವರ ನಿಧನ ಸುದ್ದಿಯನ್ನು ಪತ್ನಿ ಮತ್ತು ಮಕ್ಕಳು ಕುಗ್ಗಿ ಹೋಗುತ್ತಾರೆ ಎಂಬ ಕಾರಣಕ್ಕೆ ತಿಳಿಸಿರಲಿಲ್ಲ. ಬದಲಿಗೆ ಗಾಯಗಳಾಗಿವೆ ಎಂದು ತಿಳಿಸಲಾಯಿತು. ರಾಷ್ಟ್ರೀಯ ರೈಫಲ್ಸ್‌ನಿಂದ ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಗೆ ಹೋಗಿದ್ದ ಮನ್‌ಪ್ರೀತ್ ರಾಷ್ಟ್ರ ಸೇವೆಯಲ್ಲಿ ವೀರೋಚಿತ ಅಂತ್ಯವನ್ನು ಕಂಡಿದ್ದಾರೆ.
ಇದನ್ನೂ ಓದಿ:ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಸೇನೆಯ ಕರ್ನಲ್, ಮೇಜರ್ ಸೇರಿ ಮೂವರು ಹುತಾತ್ಮ