ಪುಣೆ (ಮಹಾರಾಷ್ಟ್ರ): ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಬೋರ್ ಘಾಟ್‌ನಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಮೂರು ಟ್ರಕ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ಪರಿಣಾಮ ಎರಡು ಟ್ರಕ್‌ಗಳು ಪಕ್ಕದ 100 ಅಡಿ ಕಣಿವೆಗೆ ಉರುಳಿ ಬಿದ್ದಿವೆ.
ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಂದು ಕಂಟೈನರ್ನಲ್ಲಿ ಈರುಳ್ಳಿ ಹಾಗೂ ಇನ್ನೊಂದು ಕಂಟೇನರ್ನಲ್ಲಿ ಮನೆ ಬಳಕೆ ವಸ್ತುಗಳಿದ್ದವು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಕಂಟೈನರ್ ಪಲ್ಟಿಯಾಗಿದ್ದು, ರಸ್ತೆಯ ತುಂಬೆಲ್ಲಾ ಈರುಳ್ಳಿ ಹರಡಿಕೊಂಡಿವೆ. ಘಟನೆಯಿಂದ ಬೋರ್ ಘಾಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರ ಸುಗಮಗೊಳಿಸಲು ಹೆದ್ದಾರಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಒನ್ ವೇನಲ್ಲಿ ಹೋದ ದ್ವಿಚಕ್ರ ವಾಹನ... ಲಾರಿ ಹರಿದು ಸವಾರ ಸಾವು