ಇಂದೋರ್ (ಮಧ್ಯಪ್ರದೇಶ): ಕಾಲೇಜಿನ ಪ್ರಾಂಶುಪಾಲೆಯನ್ನು ಮಾಜಿ ವಿದ್ಯಾರ್ಥಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಈ ಭಯಾನಕ ಘಟನೆಯಿಂದ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?: ಇಲ್ಲಿನ ಸಿಮ್ರೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ (54) ಎಂಬುವವರೇ ಕೊಲೆಯಾದವರು. ಕಾಲೇಜಿನ ಮಾಜಿ ವಿದ್ಯಾರ್ಥಿ, 24 ವರ್ಷದ ಅಶುತೋಷ್ ಶ್ರೀವಾಸ್ತವ್ ಎಂಬುವವನೇ ಈ ಕೃತ್ಯ ಎಸಗಿದ್ದಾನೆ. ಆರೋಪಿಯು ತನ್ನ ಬಿ.ಫಾರ್ಮ ಅಂತಿಮ ವರ್ಷದ ಏಳನೇ ಸೆಮಿಸ್ಟರ್ನಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ. ನಂತರ ಎಂಟನೇ ಸೆಮಿಸ್ಟರ್ ಪರೀಕ್ಷೆ ಬರೆದು ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿದ್ದ. ಆದರೆ, ಏಳನೇ ಸೆಮಿಸ್ಟರ್ನಲ್ಲಿ ವಿಷಯಗಳು ಬಾಕಿ ಉಳಿದಿರುವುದರಿಂದ ಅಶುತೋಷ್ಗೆ ಅಂಕಪಟ್ಟಿ ನೀಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ಪ್ರಕರಣ: ಆರೋಪಿಗೆ 14 ದಿನ ರಿಮಾಂಡ್, ಪೊಲೀಸರು ಹೇಳಿದ್ದೇನು?
ಇದೇ ವಿಷಯವಾಗಿ 2021ರಿಂದಲೂ ಕಾಲೇಜಿಗೆ ಬಂದು ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರ ಬಳಿ ಬಂದು ಅಶುತೋಷ್ ಶ್ರೀವಾಸ್ತವ್ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಪ್ರಾಂಶುಪಾಲೆ ವಿಮುಕ್ತ ಶರ್ಮಾ, ಪ್ರಾಧ್ಯಾಪಕರಾದ ವಿಜಯ್ ಪಟೇಲ್, ಉಮೇಶ್ ಪೊಲೀಸ್ ಠಾಣೆಗೆ ತೆರಳಿ ನಾಲ್ಕು ಬಾರಿ ಲಿಖಿತ ದೂರು ನೀಡಿದ್ದರು. ಇದರ ನಡುವೆ ಫೆ.20ರಂದು ಪ್ರಾಂಶುಪಾಲೆ ವಿಮುಕ್ತ ಶರ್ಮಾ ಕಾಲೇಜು ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾಲೇಜು ಆವರಣಕ್ಕೆ ನುಗ್ಗಿ ಆರೋಪಿ ವಿದ್ಯಾರ್ಥಿ ಅಡ್ಡಗಟ್ಟಿದ್ದ.
ಅಂತೆಯೇ, ಪ್ರಾಂಶುಪಾಲೆಯ ಕಾರಿನ ಮೇಲೆ ಪೆಟ್ರೋಲ್ ಬೆಂಕಿ ಹಚ್ಚಿದ್ದ. ಇದರಿಂದ ವಿಮುಕ್ತ ಶರ್ಮಾ ದೇಹಕ್ಕೆ ಬೆಂಕಿ ಹೊತ್ತುಕೊಂಡಿದ್ದು, ನೆರವಿಗಾಗಿ ಕಾಲೇಜಿನ ಕಡೆಗೆ ಓಡಿ ಹೋಗಿದ್ದರು. ಆಗ ಕಾಲೇಜಿನ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಶೇ.80ರಷ್ಟು ಬೆಂಕಿಯಲ್ಲಿ ಬೆಂದು ಹೋಗಿದ್ದು ವಿಮುಕ್ತ ಶರ್ಮಾ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಕೊನೆಗೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ: ಫೆ.20ರಂದು ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಬಳಿಕ ಆರೋಪಿ ವಿದ್ಯಾರ್ಥಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ಇಷ್ಟರಲ್ಲೇ ಆತನನ್ನು ಬಂಧಿಸಲಾಗಿತ್ತು. ಈ ಮೊದಲು ಆರೋಪಿ ವಿರುದ್ಧ ಐಪಿಸಿಯ ಸೆಕ್ಷನ್ 307ರಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈಗ ಪ್ರಾಂಶುಪಾಲರ ನಿಧನದ ನಂತರ ಸೆಕ್ಷನ್ 302ರಡಿ ಕೊಲೆ ಪ್ರಕರಣವನ್ನು ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ. ಮತ್ತೊಂದೆಡೆ, ಇಂದೋರ್ ಜಿಲ್ಲಾಧಿಕಾರಿ ಇಳಯರಾಜ ಟಿ, ಕೂಡ ಆರೋಪಿ ವಿರುದ್ಧ ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಅಡಿಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ:ಗಂಡ ಹೆಂಡತಿ ಮಧ್ಯೆ ಜಗಳ: ಅತ್ತೆಯನ್ನೇ ಹತ್ಯೆ ಮಾಡಿದ ಅಳಿಯ