ನಬರಂಗ್ಪುರ(ಒಡಿಶಾ): ಒಡಿಶಾದ ಜಗತ್‌ಸಿಂಗ್‌ಪುರದ ಸ್ವಾಮಿ ವಿವೇಕಾನಂದ ಸ್ಮಾರಕ ಸ್ವಾಯತ್ತ ಕಾಲೇಜಿನಲ್ಲಿ ನಡೆದ ಘಟನೆ ನಂತರ ಅಂತಹದೇ ಘಟನೆ ಇದೀಗ ಅದೇ ರಾಜ್ಯದ ನಬರಂಗ್ಪುರದಲ್ಲಿ ನಡೆದಿದೆ. ಪ್ರೇಮಿಗಳ ದಿನದಂದು ಬಾಯ್ಫ್ರೆಂಡ್ ಇಲ್ಲದೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ವಿದ್ಯಾರ್ಥಿನಿಯರಿಗೆ ನೀಡಿರುವ ನೋಟಿಸ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗ ವೈರಲ್ ಆಗುತ್ತಿರುವ ನೋಟಿಸ್ ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನಿಂದ ಹೊರಡಿಸಲಾಗಿದ್ದು ಎನ್ನುವ ವದಂತಿಯೂ ಹಬ್ಬಿದೆ. ಆದರೆ ಸದ್ಯಕ್ಕಂತು ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಇಂತಹ ಒಂದು ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನಿಂದ ಹೊರಡಿಸಲಾಗಿದ್ದು ಎಂದು ಹೇಳಲಾಗುತ್ತಿರುವ ಈ ನೋಟಿಸ್‌ನಲ್ಲಿ ಕಾಲೇಜು ಪ್ರಾಂಶುಪಾಲ ಸಹಿಯೂ ಇದೆ. ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ವೈರಲ್ ಆಗಿರುವ ಈ ನೋಟಿಸ್ ಬಗ್ಗೆ ವಿದ್ಯಾರ್ಥಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನೋಟಿಸ್ ನಕಲಿ ಎಂದು ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನ ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?:ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನೋಟಿಸ್‌ನಲ್ಲಿ 'ಫೆಬ್ರವರಿ 14 ರೊಳಗೆ ಎಲ್ಲಾ ಹುಡುಗಿಯರು ಕನಿಷ್ಠ ಒಬ್ಬ ಬಾಯ್ಫ್ರೆಂಡ್ ಹೊಂದಿರುವುದು ಕಡ್ಡಾಯ. ಭದ್ರತಾ ಉದ್ದೇಶಗಳಿಗಾಗಿ ಇದನ್ನು ಮಾಡಲಾಗಿದೆ. ಬಾಯ್ಫ್ರೆಂಡ್ ಇಲ್ಲದೆ ಬರುವ ಒಂಟಿ ಹುಡುಗಿಯರಿಗೆ ಕಾಲೇಜು ಆವರಣಕ್ಕೆ ಪ್ರವೇಶವಿಲ್ಲ. ಕಾಲೇಜು ಪ್ರವೇಶಿಸಬೇಕಾದರೆ ಅವರು ತಮ್ಮ ಗೆಳೆಯನೊಂದಿಗಿನ ಇತ್ತೀಚಿನ ಚಿತ್ರವನ್ನು ತೋರಿಸಬೇಕು. ಪ್ರೀತಿಯನ್ನು ಹಂಚಿರಿ.' ಎಂದು ಬರೆಯಲಾಗಿದೆ. ವಿದ್ಯಾರ್ಥಿನಿಯರು ತಮ್ಮ ಗೆಳೆಯನೊಂದಿಗೆ ಫೋಟೋ ತೆಗೆದು ಗುರುತಿನ ಚೀಟಿಯಂತೆ ಕಾಲೇಜಿನ ಪ್ರವೇಶ ದ್ವಾರದಲ್ಲಿ ತೋರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆಶ್ಚರ್ಯವೆಂದರೆ ನಕಲಿ ಎಂದು ಹೇಳಲಾಗುತ್ತಿರುವ ನೋಟಿಸ್‌ನಲ್ಲಿ ಕಾಲೇಜಿನ ಪ್ರಾಂಶುಪಾಲರ ಸಹಿ ಇದೆ.