ಭದ್ರಾದ್ರಿ(ತೆಲಂಗಾಣ):ಈಗ ಎಲ್ಲದಕ್ಕೂ ಜನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿದ್ದರೂ ತುಸು ಸ್ಥಿತಿವಂತರಿದ್ದರೆ ಸಾಕು ಅವರೆಲ್ಲ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರದ ಸ್ಪಚ್ಚತೆ, ವೈದ್ಯರ ಕೊರತೆ, ಉದ್ದುದ್ದ ಪಾಳೆಗಳ ಸಹವಾಸ ಬೇಡ ಎಂಬ ಕಾರಣಕ್ಕೆ ಬಹುತೇಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.
ಆದರೆ, ಇಲ್ಲೊಬ್ಬ ಜಿಲ್ಲಾಧಿಕಾರಿ ತಮ್ಮ ಪತ್ನಿಯನ್ನ ಸರ್ಕಾರ ಆಸ್ಪತ್ರೆಗೆ ಸೇರಿಸಿ ಅಲ್ಲೇ ಚಿಕಿತ್ಸೆ ಕೊಡಿಸಿ, ಸುರಕ್ಷಿತ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಸೌಲಭ್ಯ ಪಡೆಯುವ ಮಾರ್ಗಗಳಿದ್ದರೂ ಅದೆಲ್ಲವನ್ನು ಬದಿಗೊತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸುವ ಮೂಲಕ ತಾವೊಬ್ಬ ಜನಸಾಮಾನ್ಯ ಎಂಬುದನ್ನು ಋಜುವಾತು ಮಾಡಿದ್ದಾರೆ.
ಹೌದು ಭದ್ರಾದ್ರಿ ಕೊತೆಗುಡೆಮ್ ಜಿಲ್ಲೆಯ ಜಿಲ್ಲಾಧಿಕಾರಿ ಅನುದೀಪ್ ದುರಿಶೆಟ್ಟಿ, ತಮ್ಮ ಪತ್ನಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವ ಬದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.