ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನಲ್ಲಿ ಕಾರಿಗೆ ಅಳವಡಿಸಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಾಲ್ವರು ಕಟ್ಟಡದಿಂದ ಹೊರಬಂದು ಭಾರವಾದ ವಸ್ತುವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಭಾನುವಾರ ಕೊಯಮತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜಮೀಶಾ ಮುಬಿನ್ (25) ಎಂಬಾತ ಮೃತಪಟ್ಟಿದ್ದ. ಈತನ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಸ್ಫೋಟಕ ಕೂಡ ಪತ್ತೆಯಾಗಿರುವುದರಿಂದ ಭಯೋತ್ಪಾದನೆ ಸಂಪರ್ಕದ ಶಂಕೆ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 2019ರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಐಸಿಸ್ ಸಂಪರ್ಕದ ಸಂಬಂಧ ಹಿನ್ನೆಲೆ ಜಮೀಶಾ ಮುಬಿನ್ಅನ್ನು ವಿಚಾರಣೆಗೊಳಪಡಿಸಿದ್ದವು. ಆದರೆ ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಸಿ ಸೈಲೇಂದ್ರ ಬಾಬು ಹೇಳಿದ್ದಾರೆ.
ಇದನ್ನೂ ಓದಿ:ಕಾರಿನಲ್ಲಿ ಅಳವಡಿಸಿದ್ದ ಸಿಲಿಂಡರ್ ಸ್ಫೋಟ; ವ್ಯಕ್ತಿ ಸಜೀವ ದಹನ
ಸಿಸಿಟಿವಿಯಲ್ಲಿ ಸೆರೆಯಾಗಿದ್ದೇನು? ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ನಾಲ್ವರು ಕಟ್ಟಡದಿಂದ ಹೊರಬಂದು ಭಾರವಾದ ವಸ್ತುವನ್ನು, ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಬಟ್ಟೆಯಲ್ಲಿ ಸುತ್ತಿ ಮನೆಯ ಮುಂದೆ ಇಟ್ಟಿದ್ದಾರೆ. ನಂತರ ನಾಲ್ವರಲ್ಲಿ ಒಬ್ಬರು ಕಾರನ್ನು ನಿಲ್ಲಿಸಿದ ಇನ್ನೊಂದು ತುದಿಗೆ ಹೋಗುತ್ತಾರೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಹಿಂತಿರುಗುತ್ತಾರೆ. ಆ ನಂತರ ನಾಲ್ಕು ವ್ಯಕ್ತಿಗಳು ಭಾರವಾದ ವಸ್ತುವನ್ನು ಕಾರಿನ ಕಡೆಗೆ ತೆಗೆದುಕೊಂಡು ಹೋಗಿದ್ದು, ಆ ವಸ್ತುವನ್ನು ಕಾರಿನ ಒಳಗೆ ತುಂಬಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿ ಕಂಡುಬಂದಿಲ್ಲ.
ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟೈ ಈಶ್ವರನ್ ದೇವಾಲಯದ ಸುತ್ತಮುತ್ತಲಿನ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದ್ದು, ಸ್ಥಳದಲ್ಲಿ ಭಾನುವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.