ವಿಜಯವಾಡ: ಮೂರು ದಿನಗಳ ಸಂಕ್ರಾಂತಿ ಹಬ್ಬದ ಮೊದಲ ದಿನವಾದ ಶನಿವಾರ ಆಂಧ್ರಪ್ರದೇಶದ ವಿಜಯವಾಡದ ಸುತ್ತಮುತ್ತಲಿನ ಕೃಷ್ಣ ಮತ್ತು ಎನ್‌ಟಿಆರ್ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಕೋಳಿ ಕಾಳಗ ಮತ್ತು ಜೂಜಾಟವನ್ನು ಅದ್ಧೂರಿಯಾಗಿ ನಡೆಸಲಾಯಿತು. ಕೋಳಿ ಕಾಳಗವನ್ನು ನಿಷೇಧಿಸಿ ಹೈಕೋರ್ಟ್ ಆದೇಶ ನೀಡಿದ್ದರೂ ಚೋಡಾವರಂನ ಎಡುಪುಗಲ್ಲುನಲ್ಲಿ 'ಸಂಕ್ರಾಂತಿ ಆಚರಣೆ' ನೆಪದಲ್ಲಿ ಸ್ಥಳೀಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ಬೆಂಬಲದೊಂದಿಗೆ ಸಂಘಟನಾ ಸಮಿತಿಗಳನ್ನು ರಚಿಸಿ 'ಸುವ್ಯವಸ್ಥಿತ' ರೀತಿಯಲ್ಲಿ ಅಖಾಡಗಳನ್ನು ಸ್ಥಾಪಿಸಲಾಗಿತ್ತು.
ಎನ್‌ಟಿಆರ್, ಕೃಷ್ಣಾ, ಏಲೂರು, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮಾ, ಕಾಕಿನಾಡ, ರಾಜಮಹೇಂದ್ರವರಂ, ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತಿತರ ಜಿಲ್ಲೆಗಳಲ್ಲಿ ಕಾಳಗ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕೋಳಿಗಳ ಕಾದಾಟ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಹುಂಜಗಳ ಮೇಲೆ ಪಣತೊಡುವವರನ್ನು ಹೊರತುಪಡಿಸಿ ಇತರರಿಗೆ ಅವಕಾಶ ನೀಡದಂತೆ ಕೋಳಿಗಳ ಕಾದಾಟದ ಅಖಾಡದ ಸುತ್ತ ಮುಳ್ಳು ಬೇಲಿ ಹಾಕಲಾಗಿತ್ತು. ಕಾಳಗ ವೀಕ್ಷಿಸಲು ಎತ್ತರದ ಆಸನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರತಿಯೊಂದು ಕೋಳಿ ಕಾಳಗ ಪಂದ್ಯದ ಬೆಟ್ಟಿಂಗ್ 5 ಸಾವಿರಕ್ಕಿಂತ ಕಡಿಮೆಯಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:ಕೋಳಿಗಳ ಕಾಲಿಗೆ ಬ್ಲೇಡ್ ಕಟ್ಟದೇ ಕಾಳಗ ನಡೆಸಲು ಕೋರ್ಟ್ ಸಮ್ಮತಿ
ತಾತ್ಕಾಲಿಕ ಟೋಲ್ ಗೇಟ್ ನಿರ್ಮಾಣ: ಎಡುಪುಗಲ್ಲು ಅಖಾಡದಲ್ಲಿ ಕೋಳಿ ಕಾಳಗವಲ್ಲದೆ, ಇಸ್ಪೀಟ್, ರೂಲೆಟ್ ಮತ್ತಿತರ ಜೂಜಿನ ಆಟಗಳನ್ನು ಆಯೋಜಿಸಲಾಗಿತ್ತು. ಅಖಾಡಗಳಿಗೆ ಹೋಗುವ ರಸ್ತೆಗಳಲ್ಲಿ ಬ್ಯಾನರ್‌ಗಳ ಮೇಲೆ ಮಾಹಿತಿ ಪ್ರದರ್ಶನದ ಮೂಲಕ ಜನರು ಸುಲಭವಾಗಿ ಅಖಾಡಗಳನ್ನು ತಲುಪಬಹುದು ಎಂದು ಸಂಘಟಕರು ಖಚಿತಪಡಿಸಿದರು. ಅಲ್ಲದೇ ಸಂಘಟಕರು ತಾತ್ಕಾಲಿಕ ಟೋಲ್ ಗೇಟ್‌ಗಳು ಮತ್ತು ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸಿ, ₹ 50 ರಿಂದ ₹ 200 ರವರೆಗೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.