ಬಿಜಾಪುರ (ಛತ್ತೀಸ್ಗಢ):ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಪ್ರಮುಖ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಇನ್ಸ್ಪೆಕ್ಟರ್ವೊಬ್ಬರು ತಮ್ಮ ಸರ್ವೀಸ್ ಎಕೆ 47 ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ನಡೆದಿದೆ.
ಕೋಬ್ರಾ 210ನೇ ಬೆಟಾಲಿಯನ್ನ ಇನ್ಸ್ಪೆಕ್ಟರ್ ಸಫಿ ಆಖ್ತಾರ್ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ. ರಾಜಧಾನಿ ರಾಯಪುರದಿಂದ 400 ಕಿಮೀ ದೂರ ಇರುವ ಬಿಜಾಪುರದಲ್ಲಿರುವ ಸಿಆರ್ಪಿಎಫ್ನ 170ನೇ ಬೆಟಾಲಿಯನ್ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿದ ಸಹೋದ್ಯೋಗಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ಸ್ಪೆಕ್ಟರ್ ಅನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಮೋಕೂರ್ ಕ್ಯಾಂಪ್ನಲ್ಲಿ ಕಮಾಂಡೋ ಆಖ್ತಾರ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆದರೆ, ಇತ್ತೀಚೆಗೆ ವಿಜಾಪುರಕ್ಕೆ ಆಗಮಿಸಿದ್ದರು. ಕೆಲ ದಿನಗಳಲ್ಲಿ ಅವರು ರಜೆ ಮೇಲೆ ದೆಹಲಿಗೆ ಹೋಗಬೇಕಿತ್ತು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಯಾವುದೇ ಡೆತ್ನೋಟ್ ಸಹ ಪತ್ತೆಯಾಗಿಲ್ಲ. ಕೌಟುಂಬಿಕ ವಿಷಯವಾಗಿ ಸಾವಿಗೆ ಶರಣಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಇದೆ. ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.